ಚಾಮರಾಜನಗರದ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯತನ ಬಯಲಾಗಿದೆ. ಬಿಆರ್‌ಟಿ ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿದ್ದ ಬೆಂಗಳೂರು ಮೂಲದ ಇಬ್ಬರು ಯುವಕರ ವಿರುದ್ಧ ಇದೀಗ ಎಫ್‌ಐಆರ್ ದಾಖಲಾಗಿದೆ.
ಸೂಕ್ಷ್ಮ ವನ್ಯಜೀವಿ ಧಾಮವಾದ ಇದು ಹುಲಿಗಳ ಸಂರಕ್ಷಣಾ ಪ್ರದೇಶವಾಗಿದೆ, ಇಲ್ಲಿ ಸಾಮಾನ್ಯ ಪ್ರವೇಶ ನಿಷಿದ್ಧ. ಆದರೆ ಬೆಂಗಳೂರು ಮೂಲದ ಹರ್ಷರಾಜ್ ಮತ್ತು ಸತೀಶ್ ಕುಮಾರ್ ತಮ್ಮ ಥಾರ್ ಜೀಪ್‌ನಲ್ಲಿ ಬೂದಿಪಡಗದ ಕಳ್ಳಬೇಟೆ ತಡೆ ಶಿಬಿರಕ್ಕೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಕೇವಲ ಅಕ್ರಮ ಪ್ರವೇಶವಷ್ಟೇ ಅಲ್ಲ, ಇವರು ಶಿಬಿರದೊಳಗೆ ಫೈರ್ ಕ್ಯಾಂಪ್ ಕೂಡ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕೃತ್ಯದಿಂದಾಗಿ, ಯುವಕರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಆದರೆ ಅರಣ್ಯ ಇಲಾಖೆ ಸಿಬ್ಬಂದಿ ಚೆಕ್ ಪೋಸ್ಟ್ ಗಳಲ್ಲಿ ಎಷ್ಡು ಅಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ಇದು ತಾಜಾ ಉದಾಹರಣೆ. ಈ ಯುವಕರು ಸ್ವತಃ ವಾಹನದಲ್ಲಿ ಅರಣ್ಯ ಪ್ರವೇಶಿಸಲು ಅನುಮತಿ ಕೊಟ್ಟಿದ್ದು ಯಾರು? ಅಧಿಕಾರಿಗಳು ಅಥವಾ ಸಿಬ್ಬಂದಿಯೇ ಅವಕಾಶ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಕ್ರಮ ಪ್ರವೇಶ ಮಾಡಿದವರ ಮೇಲೆ ಮಾತ್ರ ಎಫ್ ಐ ಆರ್ ದಾಖಲಿಸಿದರೆ ಸಾಲದು. ಪ್ರವೇಶಕ್ಕೆ ಅವಕಾಶ ನೀಡಿದವರ ವಿರುದ್ಧ ಕ್ರಮ ಆಗಬೇಕು ಎಂಬ ಕೂಗು ಕೇಳಿಬಂದಿದೆ.



