ಪಾಕಿಸ್ತಾನ: ನೆರೆರಾಷ್ಟ್ರ ಪಾಕಿಸ್ತಾನದ ಬನ್ನು ಜಿಲ್ಲೆಯಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ 15 ಪೊಲೀಸರು ಬಲಿಯಾಗಿರುವ ಘಟನೆ ನಡೆದಿದೆ.
ಪಾಕಿಸ್ತಾನದ ಬನ್ನು ಜಿಲ್ಲೆಯ ಫತೇಹ್ ಖೇಲ್ ಎಂಬಲ್ಲಿರುವ ಪೊಲೀಸ್ ಚೆಕ್-ಪೋಸ್ಟ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಸ್ಫೋಟಕಗಳನ್ನು ತುಂಬಿದ್ದ ವಾಹನವನ್ನು ಉಗ್ರರು ನೇರವಾಗಿ ಪೊಲೀಸ್ ಕೇಂದ್ರಕ್ಕೆ ಡಿಕ್ಕಿ ಹೊಡೆಸಿದ್ದರಿಂದ ದೊಡ್ಡ ಮಟ್ಟದ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 15 ಪೊಲೀಸ್ ಸಿಬ್ಬಂದಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಫೋಟದ ತೀವ್ರತೆಗೆ ಚೆಕ್-ಪೋಸ್ಟ್ ಕಟ್ಟಡವು ಸಂಪೂರ್ಣವಾಗಿ ನೆಲಸಮವಾಗಿದ್ದು, ಹಲವು ಸಿಬ್ಬಂದಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿದ ತಂಡಗಳು ಮೂವರು ಅಧಿಕಾರಿಗಳನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದವು. ಪ್ರಸ್ತುತ ಗಾಯಾಳುಗಳಿಗೆ ಬನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಡಿಐಜಿ ಸಜ್ಜದ್ ಖಾನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಮೃತರ ಪೈಕಿ ರೆಹಮತ್ ಅಯಾಜ್ ಮತ್ತು ಸನಾವುಲ್ಲಾ ನಿಯಾಜ್ ಅಲಿ ಎಂಬ ಅಧಿಕಾರಿಗಳನ್ನು ಗುರುತಿಸಲಾಗಿದೆ.



