ಹೊಸದಿಲ್ಲಿ: ರಾಜ್ಯ ವಿಧಾನಸಭೆಗಳಲ್ಲಿ ಅಂಗೀಕೃತವಾದ ಮಸೂದೆಗಳನ್ನು ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಅನುಮೋದಿಸಲು ಕಾಲಮಿತಿ ನಿಗದಿಪಡಿಸುವ ಕುರಿತು ಉಂಟಾದ ಸಾಂವಿಧಾನಿಕ ಗೊಂದಲದ ಬೆನ್ನಲ್ಲೇ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ 14 ಪ್ರಶ್ನೆಗಳ ಪರಿಶೀಲನೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಈ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಮಹತ್ವದ ತೀರ್ಮಾನ ಮಾಡಿದೆ.
ಈ ಪೀಠದಲ್ಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿಕ್ರಂ ನಾಥ್, ಪಿ.ಎಸ್. ನರಸಿಂಹ ಮತ್ತು ಎ.ಎಸ್. ಚಂದೂರ್ಕರ್ ಅವರಿದ್ದಾರೆ. ರಾಷ್ಟ್ರಪತಿಗಳ ಪ್ರಶ್ನೆಗಳು ದೇಶದ ಎಲ್ಲ ರಾಜ್ಯಗಳಿಗೂ ಪರಿಣಾಮ ಬೀರುವವೆಯೆಂಬ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಒಂದು ವಾರದ ಒಳಗೆ ಪ್ರತಿಕ್ರಿಯೆ ಕೋರಿದೆ.
ಈ ವಿಚಾರಣೆಗೆ ಸಂಬಂಧಿಸಿದ ದಿನಾಂಕವನ್ನು ಜುಲೈ 29ರಂದು ನಿಗದಿಪಡಿಸಲಾಗುವುದು ಎಂದು ತಿಳಿದು ಬಂದಿದೆ. ಆಗಸ್ಟ್‌ನ ಮಧ್ಯಭಾಗದಲ್ಲಿ ವಿಚಾರಣೆ ಆರಂಭವಾಗುವ ಸಾಧ್ಯತೆ ಇದೆ.