ಹೊಸದಿಲ್ಲಿ: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯಲಿರುವ ದಸರಾ ಉತ್ಸವಕ್ಕೆ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವ ಕುರಿತು ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಅರ್ಜಿದಾರರ ವಾದ ಆಲಿಸಿ, ವಿಚಾರಣೆಗೆ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿ ಅರ್ಜಿ ತಳ್ಳಿಹಾಕಿತು.
ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್ “ಹಿಂದೂಯೇತರರಿಗೆ ದೇವಾಲಯದ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ” ಎಂದು ವಾದಿಸಿದರೂ, ನ್ಯಾಯಾಲಯ “ಮೂರು ಬಾರಿ ವಜಾ ಎಂದು ಹೇಳಿದ್ದೇವೆ, ಇನ್ನೇನು ಬೇಕು?” ಎಂದು ಸ್ಪಷ್ಟವಾಗಿ ತಿರಸ್ಕರಿಸಿತು. ಇದಕ್ಕೂ ಮುನ್ನ ಸೆಪ್ಟೆಂಬರ್ 15ರಂದು ಕರ್ನಾಟಕ ಹೈಕೋರ್ಟ್ ಕೂಡ ಇದೇ ಅರ್ಜಿಯನ್ನು ತಳ್ಳಿಹಾಕಿತ್ತು.
ಹೈಕೋರ್ಟ್ ಹೇಳಿಕೆಯಂತೆ, ದಸರಾ ಹಬ್ಬ ಸರ್ಕಾರ ಆಯೋಜಿಸುತ್ತಿರುವ ಸಾರ್ವಜನಿಕ ಆಚರಣೆ ಆಗಿದ್ದು, ಧರ್ಮ ಆಧಾರದ ಮೇಲೆ ಆಹ್ವಾನ ನೀಡಲು ವಿರೋಧವಿಲ್ಲ. ಆದ್ದರಿಂದ ಬಾನು ಮುಷ್ತಾಕ್ ಆಹ್ವಾನದಲ್ಲಿ ಯಾವುದೇ ಕಾನೂನು ಉಲ್ಲಂಘನೆ ಇಲ್ಲವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.