ಚಿತ್ರದುರ್ಗ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಗ್ರಾಮವನ್ನಾದರೂ 24×7 ನಿರಂತರ ಕುಡಿಯುವ ನೀರು ಸರಬರಾಜು ಗ್ರಾಮವೆಂದು ಘೋಷಣೆ ಮಾಡಿ, ಮಾದರಿ ಗ್ರಾಮಗಳನ್ನಾಗಿ ರೂಪಿಸಿ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕರು ಹಾಗೂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ (ಗ್ರಾಮ್ಸ್) ಸಹಯೋಗದಲ್ಲಿ ಜಲಜೀವನ್ ಮಿಷನ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆ ಹಾಗೂ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಕುರಿತು ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗಣಕಯಂತ್ರ ನಿರ್ವಾಹಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್‍ಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಅಡಿಯಲ್ಲಿ ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರವ್ವ ನಾಗತಿಹಳ್ಳಿ ಹಾಗೂ ದೇವಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಚನಹಳ್ಳಿ ಲಂಬಾಣಿಹಟ್ಟಿ ಗ್ರಾಮಗಳನ್ನು 24×7 ನಿರಂತರ ಕುಡಿಯುವ ನೀರು ಸರಬರಾಜು ಗ್ರಾಮವೆಂದು ಈಗಾಗಲೇ ಘೋಷಣೆ ಮಾಡಲಾಗಿದ್ದು, ಉಳಿದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು 24×7 ಗ್ರಾಮಗಳೆಂದು ಘೋಷಣೆ ಮಾಡಲು ಕ್ರಮವಹಿಸಲು ತಿಳಿಸಿದರು.

ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಕಾರ್ಯಾಚರಣೆ ಮತ್ತು ನಿರ್ವಹಣೆ ನೀತಿಯನ್ನು ಗ್ರಾಮ ಪಂಚಾಯಿತಿಗಳು ಅಳವಡಿಸಿಕೊಂಡು ಅದರ ಪ್ರಕಾರ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ನೀರಿನ ಕಂದಾಯವನ್ನು ಸಂಗ್ರಹಿಸಿ, ವಿಡಬ್ಲ್ಯೂಎಸ್‍ಸಿ ಖಾತೆಗೆ ಜಮೆ ಮಾಡಲು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳನ್ನು ಕಡ್ಡಾಯವಾಗಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆಯನ್ನು ಮಾಡಿ, ಸಭಾ ನಡಾವಳಿಯನ್ನು ಜಿಲ್ಲಾ ಪಂಚಾಯತ್ ಕಾರ್ಯಾಲಯಕ್ಕೆ ಸಲ್ಲಿಸುವುದು ಹಾಗೂ ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ಪೂರ್ಣಗೊಂಡ ನಂತರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಎಲ್ಲಾ ಮನೆಗಳಿಗೆ ನಳ ಸಂಪರ್ಕ ಕಲ್ಪಿಸಿರುವ ಬಗ್ಗೆ ಪರಿಶೀಲನೆ ಮಾಡಿ ನಂತರ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಕೊಂಡು ಹರ್ ಘರ್ ಜಲ್ ಘೋಷಣೆ ಮಾಡಲು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ವಿಭಾಗದ ಹಿರಿಯೂರು ಮತ್ತು ಹೊಸದುರ್ಗ ತಾಲ್ಲೂಕುಗಳ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಪ್ರಸನ್ನ ಕುಮಾರ್, ಹಸನ್ ಪಾಷಾ, ಜಲ ಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ ಎಸ್ ನಾಡರ್, ಜಿಲ್ಲಾ ಐ.ಇ.ಸಿ ಸಮಾಲೋಚಕರಾದ ಬಿ.ಸಿ.ನಾಗರಾಜು, ಕೆಎಸ್‍ಆರ್‍ಡಬ್ಲ್ಯೂಎಸ್‍ಪಿ ಸಮಾಲೋಚಕರಾದ ಕಿರಣ್ ಪಾಟೀಲ್, ಚಂದ್ರಕಾಂತ್, ಪ್ರವೀಣ್, ಯಲಪ್ಪ, ಗೀತಾ ಲಕ್ಷ್ಮೀ, ಸ್ವಚ್ಛ ಭಾರತ್ ಮಿಷನ್ ಮಿಷನ್ (ಗ್ರಾ) ಯೋಜನೆಯ ಜಿಲ್ಲಾ ಸಮಾಲೋಚಕರಾದ ಡಿ.ಆರ್.ವಿನಯ್ ಕುಮಾರ್, ಪ್ರಮೀಳ, ಹೆಚ್.ಆರ್.ಶಶಿಧರ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ (ಗ್ರಾಮ್ಸ್) ತಂಡದ ನಾಯಕರಾದ ನಾಗರಾಜ್, ಪ್ರತಾಪ್ ಇತರರು ಉಪಸ್ಥಿತರಿದ್ದರು.