ಚೆನ್ನೈ: ಬಹುಜನ ಸಮಾಜವಾದಿ ಪಕ್ಷದ ತಮಿಳುನಾಡಿನ ಅಧ್ಯಕ್ಷ ಕೆ. ಆರ್ಮ್‌ಸ್ಟ್ರಾಂಗ್ ಅವರನ್ನು ಹತ್ಯೆ ಮಾಡಲಾಗಿದೆ.
ಸೇಂಬಿಯಂ ಬಳಿ ೬ ಮಂದಿ ಇದ್ದ ಗ್ಯಾಂಗ್ ಆರ್ಮ್ ಸ್ಟ್ರಾಂಗ್ ಅವರನ್ನು ಕೊಲೆ ಮಾಡಿದೆ. ಗ್ರೀಮ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಯಿತಾದರೂ, ಆಸ್ಪತ್ರೆಗೆ ಕರೆತರುವ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮರಣೋತ್ತರ ಪರೀಕ್ಷೆಗಾಗಿ ಕೆ ಆರ್ಮ್‌ಸ್ಟ್ರಾಂಗ್ ಅವರ ಮೃತದೇಹವನ್ನು ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಶಂಕಿತರನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಗ್ರೇಟರ್ ಚೆನ್ನೈ ಪೊಲೀಸರು ಕನಿಷ್ಠ ೧೦ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಆರ್ಮ್‌ಸ್ಟ್ರಾಂಗ್ ಬಳಿಯಿದ್ದ ಇತರ ಇಬ್ಬರು ವ್ಯಕ್ತಿಗಳಿಗೂ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಪ್ರಕಾರ, ಆರ್ಮ್‌ಸ್ಟ್ರಾಂಗ್ ತನ್ನ ಪಕ್ಷದ ಕೆಲವು ಕಾರ್ಯಕರ್ತರೊಂದಿಗೆ ಸೆಂಬಿಯಮ್‌ನ ವೇಣುಗೋಪಾಲ್ ಸ್ಟ್ರೀಟ್‌ನಲ್ಲಿ ಸುಮಾರು ೭ ಗಂಟೆಗೆ ಕಟ್ಟಡದ ನಿರ್ಮಾಣ ಕಾರ್ಯವನ್ನು ನೋಡಿಕೊಳ್ಳುತ್ತಿದ್ದರು. ಈ ವೇಳೆ ಆರು ಮಂದಿಯ ತಂಡ ಎರಡು ಬೈಕ್‌ಗಳಲ್ಲಿ ಬಂದು ಆತನನ್ನು ಸುತ್ತುವರಿದು, ಮಾರಕಾಸ್ತ್ರಗಳಿಂದ ದಾಳಿ ನಡೆಸಿದರು, ರಕ್ತದ ಮಡುವಿನಲ್ಲಿ ಬಿದ್ದ ಆರ್ಮ್‌ಸ್ಟ್ರಾಂಗ್ ಸಾವನ್ನಪ್ಪಿದ್ದಾರೆ.
ಸೇಂಬಿಯಂ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಗುರುತಿಸಲು ಪೊಲೀಸರು ಅಪರಾಧ ನಡೆದ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅವರು ಆರ್ಮ್‌ಸ್ಟ್ರಾಂಗ್ ಅವರ ಮೊಬೈಲ್ ಫೋನ್ ದಾಖಲೆಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.