ಬೆಂಗಳೂರು: ಹನುಮಂತನಗರದ ಮುನೇಶ್ವರ ಲೇಔಟ್ ನಲ್ಲಿ ಖಾಸಗಿ ವಾಹಿನಿಯ ನಿರೂಪಕಿ ಮತ್ತು ಕಿರುತೆರೆ ನಟಿ ಶ್ರುತಿ ಮೇಲೆ ಪತಿ ಅಂಬರೀಶ್ ಚಾಕು ಇರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಶ್ರುತಿ “ಅಮೃತಧಾರೆ” ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಈ ದಾಳಿ ಜುಲೈ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶ್ರುತಿ ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶ್ರುತಿ ಮತ್ತು ಅಂಬರೀಶ್ 20 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ, ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ದಾಂಪತ್ಯ ಜೀವನದಲ್ಲಿ ಕಲಹ ಹೆಚ್ಚಾಗಿ, ಕಳೆದ ಏಪ್ರಿಲ್ ನಲ್ಲಿ ಶ್ರುತಿ ಪತಿಯಿಂದ ದೂರವಿದ್ದು, ಅಣ್ಣನ ಮನೆಯಲ್ಲಿ ವಾಸವಿದ್ದರು. ಜುಲೈ 3ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಪತಿ, ಪತ್ನಿ ರಾಜಿಯಾಗಿ ಒಂದಾಗಿದ್ದರು. ಆದರೆ ಜುಲೈ 4 ರಂದು ಮಕ್ಕಳು ಕಾಲೇಜಿಗೆ ಹೋಗಿದ್ದಾಗ ಪೆಪ್ಪರ್ ಸ್ಪ್ರೇ ಮಾಡಿ ಪತ್ನಿಯ ಕೊಲೆಗೆ ಅಂಬರೀಶ್ ಯತ್ನಿಸಿದ್ದಾನೆ.
ಮಕ್ಕಳು ಕಾಲೇಜಿಗೆ ಹೋದ ಸಮಯದಲ್ಲಿ ಅಂಬರೀಶ್ ಪೆಪ್ಪರ್ ಸ್ಪ್ರೇ ಬಳಸಿ, ಶ್ರುತಿಗೆ ತೊಡೆ, ಪಕ್ಕೆಲುಬು ಮತ್ತು ಕುತ್ತಿಗೆಗೆ ಚಾಕು ಇರಿಸಿ, ಸಿನಿಮಾ ಶೈಲಿಯಲ್ಲಿ ತಲೆ ಹಿಡಿದು ಗೋಡೆಗೆ ಬಡಿದಿದ್ದಾನೆ. ದಾಂಪತ್ಯ ಕಲಹ ಮತ್ತು ಹಣಕಾಸು ವಿಷಯಗಳಿಂದ ಕ್ರೋಧಗೊಂಡು ಈ ಕೃತ್ಯ ಎಸಗಿದ್ದಾನೆ ಎಂದು ಶ್ರುತಿ ದೂರಿನಲ್ಲಿ ಹೇಳಿದ್ದಾರೆ. ಹನುಮಂತನಗರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಅಂಬರೀಶ್‍ನನ್ನು ಬಂಧಿಸಿದ್ದಾರೆ.