Monday, September 22, 2025
Google search engine

Homeಸ್ಥಳೀಯಕುಸುಮ್-ಸಿ ಕೆಲಸ ಆರಂಭಿಸದಿದ್ದರೆ ಟೆಂಡರ್ ರದ್ದು: ಕೆ.ಎಂ.ಮುನಿಗೋಪಾಲ್ ರಾಜು

ಕುಸುಮ್-ಸಿ ಕೆಲಸ ಆರಂಭಿಸದಿದ್ದರೆ ಟೆಂಡರ್ ರದ್ದು: ಕೆ.ಎಂ.ಮುನಿಗೋಪಾಲ್ ರಾಜು

ಮೈಸೂರು, ಆಗಸ್ಟ್ 1, 2025: ಪಿಎಂ ಕುಸುಮ್ – ಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿಯಿಂದ ಕೆಲಸ ಮಾಡಬೇಕಿದ್ದು, ಈಗಾಗಲೇ ಪಿಪಿಎ ಪಡೆದು ಕೆಲಸ ಆರಂಭಿಸದ ಕಂಪನಿಗಳಿಗೆ ನೀಡಲಾಗಿರುವ ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ನಿಗಮದ ಪ್ರಧಾನ ಕಚೇರಿಯಲ್ಲಿ ಗುರುವಾರ ನಡೆದ ಕುಸುಮ್-ಸಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ಕುಸುಮ್-ಸಿ ಯೋಜನೆ ಅನುಷ್ಠಾನ ಮಾಡಲು ಗುತ್ತಿಗೆ ಪಡೆದಿರುವ ಪ್ರತಿಯೊಂದು ಏಜೆನ್ಸಿಗಳ ಕಾರ್ಯವೈಖರಿ ಹಾಗೂ ಪ್ರಗತಿಯ ಕುರಿತು ಪರಿಶೀಲನೆ ನಡೆಸಿ ಅವರು ಮಾತನಾಡಿದರು.

“ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಚರ್ಚಿಸಲಾಗಿದ್ದು, ಕೆಲಸ ಆರಂಭಿಸಲು ಆಗಸ್ಟ್ 20ರೊಳಗೆ ಕಾಲಮಿತಿ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಗೆ ಸಂಬಂಧಿಸಿದಂತೆ ಈಗಾಗಲೇ ಇಂಧನ ಖರೀದಿ ಕರಾರು(ಪಿಪಿಎ) ನೀಡಿದ್ದರೂ ಈವರೆಗೆ ಕೆಲಸ ಆರಂಭಿಸದ ಏಜೆನ್ಸಿಗಳಿಗೆ ನೋಟಿಸ್ ನೀಡಿ, ಟೆಂಡರ್ ರದ್ದುಪಡಿಸಿ ಮರು ಟೆಂಡರ್ ಕರೆಯುವಂತೆ ಇಂಧನ ಸಚಿವರು ಸೂಚನೆ ನೀಡಿದ್ದಾರೆ. ಆದ್ದರಿಂದ ಕುಸುಮ್-ಸಿ ಯೋಜನೆ ಅನುಷ್ಠಾನಕ್ಕೆ ಅಗತ್ಯ ಇರುವ ಜಾಗವನ್ನು ಗುರುತಿಸಿ, ಶೀಘ್ರವಾಗಿ ಕೆಲಸ ಆರಂಭಿಸಲು ಟೆಂಡರ್ ಪಡೆದ‌ ಏಜೆನ್ಸಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಈ ವಿಷಯದಲ್ಲಿ ನಿಗಮದ ಅಧಿಕಾರಿಗಳು ಸಹ ಹೆಚ್ಚಿನ ಮುತುವರ್ಜಿಯಿಂದ ಕೆಲಸ ಮಾಡಬೇಕು,” ಎಂದು ಸೂಚನೆ ನೀಡಿದರು.

“ಕುಸುಮ್-ಸಿ ಮೂಲಕ ಸೆಸ್ಕ್ ವತಿಯಿಂದ 3 ತಿಂಗಳಲ್ಲಿ ಕನಿಷ್ಠ 5 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ನೀಡಲಾಗಿದೆ. ಹೀಗಿದ್ದರೂ ಏಜೆನ್ಸಿಗಳು ಪಿಪಿಎ ಪಡೆದು ಹಲವು ತಿಂಗಳಾದರೂ ಕೆಲಸ ಆರಂಭಿಸದಿರುವುದು ಬೇಸರದ ಸಂಗತಿ ಆಗಿದೆ. ಟೆಂಡರ್ ಪಡೆದಿರುವ ಏಜೆನ್ಸಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕಿದೆ. ಜಾಗದ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆ ಇತ್ಯರ್ಥಪಡಿಸಿ, ಕೆಲಸ ಆರಂಭಿಸಲು ಆಗದಿದ್ದರೆ ಅಂತಹ ಏಜನ್ಸಿಗಳಿಗೆ ನೀಡಿ ಟೆಂಡರ್ ಕೈಬಿಡಬೇಕಾಗುತ್ತದೆ,” ಎಂದು ಎಚ್ಚರಿಸಿದರು.

ಜಾಗ ಸಿಗುವ ಜಾಗದಲ್ಲೇ ಕೆಲಸ ಆರಂಭಿಸಿ:
“ಕುಸುಮ್-ಸಿ ಯೋಜನೆಗೆ ಎಲ್ಲ ಕಡೆಗಳಲ್ಲೂ ಸರ್ಕಾರಿ ಜಾಗ ದೊರೆಯುವುದಿಲ್ಲ. ಅತಹ ಕಡೆಗಳಲ್ಲಿ ಖಾಸಗಿ ಜಾಗ ಪಡೆದು ಕೆಲಸ ಆರಂಭಿಸಬೇಕು. ಇನ್ನೂ ಕೆಲವು ಕಡೆಗಳಲ್ಲಿ ಅಗತ್ಯವಿರುವಷ್ಟು ಪ್ರಮಾಣದ ಜಾಗ ಸಿಗುವುದು ಕಷ್ಟಸಾಧ್ಯವಿದ್ದು, ಇಂತಹ ಕಡೆಗಳಲ್ಲಿ ಎಷ್ಟು ಪ್ರಮಾಣದಲ್ಲಿ ಜಾಗ ಲಭ್ಯವಿರುತ್ತದೆಯೋ ಆ ಸ್ಥಳದಲ್ಲೇ ಕೆಲಸ ಆರಂಭಿಸಲು ಮುಂದಾಗಬೇಕು. ನಿಗಮದ ಕಾರ್ಯಪಾಲಕ ಅಭಿಯಂತರರು ಈ ನಿಟ್ಟಿನಲ್ಲಿ ಕಿರಿಯ ಇಂಜಿನಿಯರ್‌ಗಳ ಮೂಲಕ ಸ್ಥಳೀಯವಾಗಿ ಲಭ್ಯವಿರುವ ಜಾಗಗಳನ್ನು ಗುರುತಿಸಿ, ಯೋಜನೆ ಅನುಷ್ಠಾನಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು,” ಎಂದು ಸೂಚನೆ ನೀಡಿದರು.

ಸಭೆಯಲ್ಲಿ ನಿಗಮದ ತಾಂತ್ರಿಕ ನಿರ್ದೇಶಕ ಡಿ.ಜೆ. ದಿವಾಕರ್, ಮೈಸೂರು ವಲಯ ಕಚೇರಿಯ ಮುಖ್ಯ ಇಂಜಿನಿಯರ್‌ ಮೃತ್ಯುಂಜಯ, ಹಾಸನ ವಲಯ ಕಚೇರಿಯ ಮುಖ್ಯ ಇಂಜಿನಿಯರ್ ಹರೀಶ್, ಸೆಸ್ಕ್ ಐಟಿ ಮತ್ತು ಎಂಐಎಸ್ ವಿಭಾಗದ ಪ್ರಧಾನ ವ್ಯವಸ್ಥಾಪಕ ರಾಮಸ್ವಾಮಿ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

“ಕುಸುಮ್-ಸಿ ಯೋಜನೆ ಟೆಂಡರ್ ಪಡೆದಿರುವ ಏಜೆನ್ಸಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಿ, ಯೋಜನೆ ಅನುಷ್ಠಾನಗೊಳಿಸಬೇಕಿದೆ. ನಿಗಮದ ಕಾರ್ಯಪಾಲಕ ಅಭಿಯಂತರರು ಸಹ ಹೆಚ್ಚಿನ ಮುತುವರ್ಜಿವಹಿಸಬೇಕಿದೆ. ನಿಗದಿತ ಸಮಯದಲ್ಲಿ ಕೆಲಸ ಆರಂಭಿಸದಿದ್ದರೆ ಅಂತಹ ಏಜೆನ್ಸಿಗಳ ಟೆಂಡರ್ ರದ್ದುಪಡಿಸಲಾಗುವುದು.”

ಕೆ.ಎಂ. ಮುನಿಗೋಪಾಲ್ ರಾಜು,
ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.

RELATED ARTICLES
- Advertisment -
Google search engine

Most Popular