ಬೀದರ್: ಐತಿಹಾಸಿಕ ಬಸವಕಲ್ಯಾಣ ನಗರದಲ್ಲಿ ಇಂದು (ಏಪ್ರಿಲ್ 23) ನಡೆದ ಮಹಾತ್ಮಾ ಬಸವೇಶ್ವರ ಜಾತ್ರಾ ಮಹೋತ್ಸವದ ನಡುವೆ ಭೀಕರ ಅವಘಡವೊಂದು ಸಂಭವಿಸಿದೆ. ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಮೂವರು ಭಕ್ತರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಂದು ಬೆಳಿಗ್ಗೆ ಬಸವಕಲ್ಯಾಣದ ಥೇರ್ ಮೈದಾನದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬಸವೇಶ್ವರರ ರಥೋತ್ಸವ ಆರಂಭವಾಯಿತು. ಭಕ್ತರು ಹರ್ಷೋದ್ಗಾರಗಳೊಂದಿಗೆ ರಥವನ್ನು ಎಳೆಯುತ್ತಿದ್ದಾಗ, ಏಕಾಏಕಿ ನೂಕುನುಗ್ಗಲು ಉಂಟಾಗಿದೆ. ಜನಸಮೂಹದ ಒತ್ತಡದಿಂದಾಗಿ ರಥವು ಹಠಾತ್ ವೇಗವಾಗಿ ಮುಂದೆ ಸಾಗಿದ ಪರಿಣಾಮ, ರಥದ ಹಗ್ಗ ಹಿಡಿದಿದ್ದವರ ಸಮತೋಲನ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಈ ವೇಳೆ ಮೂವರು ಭಕ್ತರು ರಥದ ಬೃಹತ್ ಚಕ್ರದ ಅಡಿಯಲ್ಲಿ ಸಿಲುಕಿದ್ದಾರೆ.
ಈ ಭೀಕರ ಅಪಘಾತದಲ್ಲಿ ಧನರಾಜ್ ಎಂಬ ಭಕ್ತನ ಎರಡು ಕಾಲುಗಳು ರಥದ ಚಕ್ರಕ್ಕೆ ಸಿಲುಕಿ ಸಂಪೂರ್ಣವಾಗಿ ಕಟ್ ಆಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ರಿಶಬ್ ಎಂಬ ಯುವಕನ ಎರಡು ಕಾಲುಗಳಿಗೂ ತೀವ್ರ ಪೆಟ್ಟಾಗಿದ್ದು, ಭೀಮಾಶಂಕರ್ ಎಂಬ ಮತ್ತೊಬ್ಬ ಭಕ್ತನಿಗೂ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಮತ್ತು ಪೊಲೀಸರು ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಧನರಾಜ್ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪ್ರತಿ ವರ್ಷ ಬಸವಕಲ್ಯಾಣದ ರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರುತ್ತಾರೆ. ಈ ಬಾರಿಯೂ ಭಕ್ತರ ಸಂಖ್ಯೆ ಮಿತಿಮೀರಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ನಂತರ ಮೈದಾನದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.



