ಮಂಡ್ಯ: ನಮ್ಮ ಹಕ್ಕನ್ನು ವಾಪಸ್ಸು ಕೊಟ್ಟಿರೋದಕ್ಕೆ ಧನ್ಯವಾದ. ನಮ್ಮ ಸಂಸ್ಕೃತಿಯನ್ನು ಬೆಂಬಲಿಸಿದ್ದಾರೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ, ಜಮ್ಮೀರ್ ಅಹಮದ್, ಯು.ಟಿ.ಖಾದರ್, ಡಿ.ಕೆ.ಶಿವಕುಮಾರ್ ಎಲ್ಲರಿಗೂ ಧನ್ಯವಾದಗಳು ಎಂದು ಹಿಜಾಬ್ ವಿವಾದ ವೇಳೆ ಹಿಜಾಬ್ ಲೇಡಿ ಎಂದು ಹೆಸರುವಾಸಿಯಾಗಿದ್ದ ಮುಸ್ಕಾನ್ ಹೇಳಿದ್ದಾರೆ.
ಮಂಡ್ಯದಲ್ಲಿ ವಿದ್ಯಾರ್ಥಿನಿ ಮುಸ್ಕಾನ್ ಮಾತನಾಡಿ, ನಾವು ಅಣ್ಣ-ತಮ್ಮಂದರ ರೀತಿ ಕಾಲೇಜಿಗೆ ಹೋಗಿ ಓದುತ್ತಾ ಇದ್ದೋ. ಅದೇ ರೀತಿ ನಾವು ಹೋಗಬೇಕಿದೆ. ಹಿಜಾಬ್ ನಮ್ಮ ಸಂಸ್ಕೃತಿ ನಮ್ಮ ಹಕ್ಕು. ಹಿಜಾಬ್ ಹಕ್ಕು ವಾಪಸ್ ಬರುತ್ತೆ ಎಂಬ ನಂಬಿಕೆ ಇದೆ. ಈಗ ಎಲ್ಲರೂ ಶಿಕ್ಷಣ ಪಡೆಯ ಬೇಕು. ಹಿಜಾಬ್ ಇದೆ ಎಲ್ಲರೂ ಬಂದು ಪರೀಕ್ಷೆ ಬರೆಯಿರಿ. ಹಿಜಾಬ್ ಎನ್ನೋದು ನಮ್ಮ ಧರ್ಮ. ಇದನ್ನು ನಾವು ಪಾಲನೆ ಮಾಡಬೇಕಾಗಿದೆ ಎಂದು ಹೇಳಿದರು.
ಹಿಜಾಬ್ ವಿವಾದದಿಂದ ಅನೇಕ ಹುಡುಗಿಯರು ಶಿಕ್ಷಣದಿಂದ ವಂಚಿತ ಆಗಿದ್ರು. ನಾನು ಸಹ ಒಂದು ವರ್ಷ ಕಾಲೇಜಿಗೆ ಹೋಗಿಲ್ಲ. ಈಗ ನಾನು ಪಿಇಎಸ್ ಕಾಲೇಜಿಗೆ ಹೋಗ್ತೀನಿ. ಎಲ್ಲರೂ ಈಗ ಬಂದು ಪರೀಕ್ಷೆ ಬರೆಯಿರಿ. ಶಿಕ್ಷಣದ ವಿಚಾರದಲ್ಲಿ ರಾಜಕೀಯ ಬೇಡಾ. ಅಣ್ಣ-ತಮ್ಮಂದಿರ ರೀತಿ ಇದ್ದೀವಿ. ಮುಂದೆಯೂ ಸಹ ಹಾಗೇಯೇ ಇರೋಣ. ಎಲ್ಲಾ ಧರ್ಮವೂ ಒಂದೇ, ಮನುಷ್ಯರ ರೀತಿ ಬದುಕೋಣಾ. ಧರ್ಮಗಳ ನಡುವೆ ಸಂಘರ್ಷ ಬೇಡ ಎಂದು ಹೇಳಿದರು.
ಪಿಇಎಸ್ ಕಾಲೇಜಿನಲ್ಲಿ ಜೈ ಶ್ರೀರಾಮ್ ಘೋಷಣೆ ನಡುವೆ ಅಲ್ಲಾ ವು ಅಕ್ಟರ್ ಎಂದು ಕೂಗಿದ್ದ ಮುಸ್ಕಾನ್ ಘೋಷಣೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.