Saturday, February 14, 2026
Google search engine

Homeರಾಜ್ಯಸುದ್ದಿಜಾಲಸತ್ಯ ಮತ್ತು ನಿಷ್ಠೆಗೆ ಹೆಸರಾದ ಕಪ್ಪಡಿ ಕ್ಷೇತ್ರದ ವಾರ್ಷಿಕ ಜಾತ್ರೆ 

ಸತ್ಯ ಮತ್ತು ನಿಷ್ಠೆಗೆ ಹೆಸರಾದ ಕಪ್ಪಡಿ ಕ್ಷೇತ್ರದ ವಾರ್ಷಿಕ ಜಾತ್ರೆ 

 ಕುಪ್ಪೆಮಹದೇವಸ್ವಾಮಿ

ಕೆ.ಆರ್.ನಗರ:  ದಕ್ಷಿಣ ಕರ್ನಾಟಕ ಮತ್ತು  ಕೇರಳ ರಾಜ್ಯದ ಗಡಿಭಾಗ ಸೇರಿದಂತೆ ಎಲ್ಲೆಡೆ ಸತ್ಯ ಮತ್ತು ನಿಷ್ಠೆಗೆ ಹೆಸರಾದ ಕಪ್ಪಡಿ ಕ್ಷೇತ್ರದ ವಾರ್ಷಿಕ ಜಾತ್ರೆ  ಮಹಾ ಶಿವರಾತ್ರಿಯಿಂದ ಆರಂಭವಾಗಿ ಮಾ.೧೩ರ ಯುಗಾದಿ ಹಬ್ಬದವರೆಗೆ ಒಂದು ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ.

ಕೆ.ಆರ್.ನಗರ ತಾಲೂಕಿನ ಕಪ್ಪಡಿ ಕ್ಷೇತ್ರದ ಪ್ರವೇಶ ದ್ವಾರ.

ಘರ್ಷಣೆ, ಕಲಹ, ಒಡಕು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳು ಕಂಡು ಬಂದರೆ ಇಂದಿಗೂ ಯಾವುದೇ ಕುಲ, ಜಾತಿ, ಧರ್ಮ, ಸಮುದಾಯದ ಭೇದವಿಲ್ಲದೆ ಕಪ್ಪಡಿಗೆ ಬಂದು ಸತ್ಯ  ಮಾಡು ಎಂದು ಕರೆಯುವುದು ವಾಡಿಕೆಯಾಗಿದೆ.

ಕೋರ್ಟು, ಕಚೇರಿ, ಪೊಲೀಸ್ ಠಾಣೆಗಳಲ್ಲಿ ಇತ್ಯರ್ಥವಾಗದ  ಹಲವು ಪ್ರಕರಣ, ವ್ಯಾಜ್ಯಗಳನ್ನು ಈ ಕ್ಷೇತ್ರಕ್ಕೆ ನಂಬಿಕೆಯಿoದ ಬರುವ ಭಕ್ತರು ಆಣೆ ಮತ್ತು ಪ್ರಮಾಣದ ಮೂಲಕ ಬಗೆಹರಿಸಿಕೊಂಡಿರುವ ಉದಾಹರಣೆಗಳು ಸಾಕಷ್ಠಿವೆ.

 ಕಪ್ಪಡಿ ಪವಿತ್ರ  ಕ್ಷೇತ್ರ ಜಾನಪದ ಕಾವ್ಯ ಹಾಗೂ ಧಾರ್ಮಿಕ ಆಚರಣೆಯ ಪ್ರಭಾವಿ ಕೇಂದ್ರವಾಗಿ ಪ್ರಸಿದ್ಧಿ ಹೊಂದಿದ್ದು  ಮೈಸೂರಿನಿಂದ ೫೦ ಕಿ.ಮೀ ಮತ್ತು  ಕೆ.ಆರ್.ನಗರದಿಂದ ೮ ಕಿಲೋ ಮೀಟರ್ ದೂರದಲ್ಲಿರುವ   ಕಾವೇರಿ ನದಿಯ ಬಲ ಭಾಗದ ದಡದಲ್ಲಿದೆ.

ಇಲ್ಲಿ ಪ್ರತಿ ವರ್ಷ ನಡೆಯುವ ವಾರ್ಷಿಕ  ಜಾತ್ರೆ ಅತ್ಯಂತ ದೊಡ್ಡ ಉತ್ಸವವಾಗಿದ್ದು,   ಮಹಾ ಶಿವರಾತ್ರಿಯಂದು ಆರಂಭವಾಗಿ ಯುಗಾದಿ ಹಬ್ಬದವರೆಗೂ ಒಂದು ತಿಂಗಳ ಕಾಲ ನಿರಂತರವಾಗಿ ನಡೆಯುವುದರಿಂದ ಕೇರಳ ರಾಜ್ಯದ ಗಡಿಭಾಗ ಸೇರಿದಂತೆ ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಮತ್ತು ಉತ್ತರ ಕರ್ನಾಟಕದ ನಾನಾ ಭಾಗಗಳಿಂದಲೂ ಭಕ್ತ ಸಾಗರ ಹರಿದು ಬರುತ್ತದೆ.

ಕ್ಷೇತ್ರದಲ್ಲಿ ಮೂರ್ತಿ ಇಲ್ಲ

ಇಲ್ಲಿ ಯಾವುದೇ ರೀತಿಯ ಮೂರ್ತಿ, ವಿಗ್ರಹ ಇರುವುದಿಲ್ಲ. ಇಲ್ಲಿರುವ ಉರಿಗಣ್ಣು ರಾಚಪ್ಪಾಜಿಯವರ ಗದ್ದುಗೆಯೇ ಸಮಸ್ತ ಪೂಜೆಯ ಕೇಂದ್ರ ಬಿಂದುವಾಗಿದ್ದು   ಅದಕ್ಕೆ ಪೂಜೆ ಪುನಸ್ಕಾರಗಳು ನಡೆಯುತ್ತವೆಯಲ್ಲದೆ ಪೂಜೆಗೆ ನೀಡುವ ತೆಂಗಿನಕಾಯಿ ಒಡೆಯುವುದಿರುವುದರ ಜತೆಗೆ ಅದನ್ನು ಭಕ್ತರಿಗೂ ಹಿಂದಿರುಗಿಸುವುದಿಲ್ಲ.

 ಇದು ದಶಕಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದ್ದು ಜಾತ್ರೆ ಆರಂಭದ ನಂತರ ಬರುವ ಹುಣ್ಣಿಮೆಯ ಬಳಿಕ  ಜನ ಸಾಗರವೇ ಹರಿದು ಬರುತ್ತದೆ.

ಆ ಕಾಲದ ಆರ್ಥಿಕ, ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಧರೆಗೆ ದೊಡ್ಡವರೆಂದೆ ಹೆಸರುವಾಸಿಯಾಗಿದ್ದ ದೈವತ್ವದ ಗುಣ ಹೊಂದಿದ್ದ ರಾಚಪ್ಪಾಜಿ, ಚನ್ನಾಜಮ್ಮ ಮೈಸೂರು ಅರಸರಿಂದ ಪೂಜೆ ಸ್ವೀಕರಿಸಿ ಎಡತೊರೆ, ಚಂದಗಾಲು ಮಾರ್ಗವಾಗಿ ಸಾಗಿ ದಟ್ಟ ಕಾಡಿನಿಂದ ಆವೃತವಾದ ಕಪ್ಪಡಿ ಕ್ಷೇತ್ರದಲ್ಲಿ ನೆಲೆ ನಿಂತರೆoದು ಇತಿಹಾಸ ತಿಳಿಸುತ್ತದೆ.

ಚೆನ್ನಾಜಮ್ಮನವರ ಗದ್ದುಗೆ.

ಉರಿ ಗದ್ದುಗೆ ಮಹಿಮೆ ಅಪಾರ

 ಒಮ್ಮೆ ಎಡತೊರೆಯ ಉಪ್ಪಲಗಶೆಟ್ಟಿ ಎಂಬಾತನ ಕನಸಿನಲ್ಲಿ ಕಾಣಿಸಿಕೊಂಡ ರಾಚಪ್ಪಾಜಿಯವರು ತಮಗೆ ಶಿವಯೋಗ ಮಂದಿರವನ್ನು ನಿರ್ಮಾಣ ಮಾಡಿಕೊಡುವಂತೆ ಪ್ರೇರಣೆ ನೀಡಿದರು.   ಗುರುವಿನ ಆಣತಿಯಂತೆ ಜಲ ಬಾವಿಯನ್ನು ತೋಡಿ ನಂದಾ ದೀವಿಗೆ ಗೂಡನ್ನು ಕೊರೆದ ಆತ ವರವೊಂದನ್ನು ಬೇಡುತ್ತಾನೆ.

ಉಪ್ಪಲಗಶೆಟ್ಟಿ  ತನ್ನ ಬಯಕೆಯಂತೆ ಉರಿ ಗದ್ದುಗೆಯ ಮೇಲೆ ಇರುವ ರುಮಾಲು ಪಡೆಯಬೇಕೆಂದು ಆರತಿ ಇಡುತ್ತಾನೆ. ಆದರೆ ಅದು ಸಾಧ್ಯವಾಗುವುದಿಲ್ಲ. ಅದಕ್ಕೆ ಕಾರಣ ಹೆಸರಿನಂತೆಯೇ ಬಹಳ ಶಕ್ತಿಶಾಲಿ, ತೀಕ್ಷಣ, ಉರಿ ಗದ್ದುಗೆಯಾಗಿದ್ದು ಈಗಲೂ ಈ ಗದ್ದುಗೆ ಮೇಲಕ್ಕೆ ಜೋಳವನ್ನು ಎಸೆದರೆ ಪುರಿಯಾಗಿ ಸಿಡಿಯುತ್ತವೆ ಎಂಬ ನಂಬಿಕೆ ಜನರಲ್ಲಿ ದೃಡವಾಗಿದೆ.

ಕೊನೆಗೆ ಈ ನರರ ಹಂಗು ತಮಗಿನ್ನು ಬೇಡವೆಂದು ರಾಚಪ್ಪಾಜಿಯವರು ತಮ್ಮ ತಂಗಿ ಚನ್ನಾಜಮ್ಮನವರೊಡನೆ  ನೆಲಬಾವಿಗಿಳಿದು ಶಾಶ್ವತ ಶಿವಯೋಗದಲ್ಲಿ ನೆಲೆಸಿದರೆನ್ನುವುದು ಪುರಾಣೈತಿಹ್ಯ.

ಅಂದಿನಿoದ ಕಪ್ಪಡಿಯಲ್ಲಿ ಮೈಸೂರು ಅರಸು ಮನೆತನದವರಿಂದ ಪೂಜಾ ಕಾರ್ಯಗಳು ನಡೆದುಕೊಂಡು ಬರುತ್ತಿದ್ದು ನೀಲಗಾರರು, ಕಂಸಾಳೆಯವರು ಹಾಡುವ ಮಂಟೇಸ್ವಾಮಿ ಕಾವ್ಯದಲ್ಲಿ ಕಪ್ಪಡಿ ರಾಚಪ್ಪಾಜಿಯವರ ಮಹಿಮೆ ಮತ್ತು ಪವಾಡಗಳ ಪರಿಚಯವಾಗುತ್ತದೆ.

ಪ್ರತಿ ವರ್ಷ ಶಿವರಾತ್ರಿಯಿಂದ ಯುಗಾದಿಯವರೆಗೆ ನಡೆಯುವ ಕಪ್ಪಡಿ ಜಾತ್ರೆಯಲ್ಲಿ ಭಕ್ತಾಧಿಗಳು ಪ್ರಾಣ ಬಲಿ ನೀಡಿ, ಪೂಜೆ ಸಲ್ಲಿಸಿ, ಹರಕೆ ತೀರಿಸಿ ಭೋಜನ ಸ್ವೀಕರಿಸುವುದು ತಲೆ ತಲಾಂತರದಿoದ ನಡೆದುಕೊಂಡು ಬಂದಿದೆ.

 ಮಳವಳ್ಳಿ ಹಾಗೂ ಬೊಪ್ಪೇಗೌಡನಪುರದ ಗುರು ಮನೆತನದವರು ಪ್ರತಿ ವರ್ಷ ಸರದಿಯಂತೆ ಜಾತ್ರೆ ಪ್ರಾರಂಭವಾದಾಗಿನಿ0ದ ಮುಗಿಯುವವರೆಗೂ ಇಲ್ಲಿಯೇ ಇದ್ದು, ಪೂಜಾ ಕಾರ್ಯಗಳನ್ನು ನಡೆಸಿಕೊಡುತ್ತಾರೆ.  ಈ ಬಾರಿ ಮಳವಳ್ಳಿಯ  ಮಂಟೇಸ್ವಾಮಿ ಮಠದ ಮಠಾಧಿಪತಿ ಎಂ.ಎಲ್.ವರ್ಚಸ್ವಿ ಸಿದ್ದಲಿಂಗರಾಜೇಅರಸ್  ಅವರ ಉಸ್ತುವಾರಿಯಲ್ಲಿ  ಪೂಜಾ ಕೈಂಕರ್ಯಗಳು ನಡೆಯಲಿವೆ.

RELATED ARTICLES
- Advertisment -
Google search engine

Most Popular