ಮಂಡ್ಯ: ಹಳೇ ಚಾಳಿಯನ್ನೆ ಕೇಂದ್ರ ಸರ್ಕಾರ ಮುಂದುವರೆಸಿದೆ ಎಂದು ಕೇಂದ್ರದ ವಿರುದ್ಧ ಶಾಸಕ ಕದಲೂರು ಉದಯ್ ಕಿಡಿ ಕಾರಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕವನ್ನೆ ಮರೆತು ಬಿಟ್ಟಿದ್ದಾರೆ. ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಿದ್ದಾರೆ. ತಮ್ಮ ಸರ್ಕಾರ ಉಳಿಸಿಕೊಳ್ಳಲು ತಮ್ಮ ಮಿತ್ರ ಪಕ್ಷಗಳಿಗೆ ಹಣ ಕೊಟ್ಟಿದ್ದಾರೆ. ಕೇವಲ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮಾತ್ರ ಗಮನ ಹರಿಸಿದ್ದಾರೆ ಎಂದು ಹರಿಹಾಯ್ದರು.
ನಿರ್ಮಲಾ ಸೀತಾರಾಮನ್ ಅವರ ಬಗ್ಗೆ ಬಹಳ ಗೌರವ ಇತ್ತು. ಈ ಬಾರಿಯಾದರೂ ರಾಜ್ಯಕ್ಕೆ ಹೆಚ್ಚಿನ ಯೋಜನೆ ಕೊಡ್ತಾರೆ ಅಂತಾ ಭಾವಿಸಿದ್ದೆವು. ಕೇಂದ್ರ ಸರ್ಕಾರಕ್ಕೆ ಇಡೀ ದೇಶದಲ್ಲೇ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ಎರಡನೇ ರಾಜ್ಯ ಕರ್ನಾಟಕ. ನಮ್ಮ ರಾಜ್ಯಕ್ಕೆ ಯಾವುದೇ ಹೊಸ ಯೋಜನೆಗಳನ್ನ ಕೊಟ್ಟಿಲ್ಲ ಎಂದು ಆರೋಪಿಸಿದರು.
ರಾಜ್ಯದಿಂದ 19 ಸಂಸದರ ಪೈಕಿ 5 ಮಂದಿ ಕೇಂದ್ರ ಸಚಿವರಿದ್ದರೂ ಸಹ ರಾಜ್ಯಕ್ಕೆ ಅನ್ಯಾಯವಾಗಿದೆ. ಯಾರೂ ಧ್ವನಿ ಎತ್ತದೇ ಮೌನವಾಗಿರುವುದು ವಿಪರ್ಯಾಸದ ಸಂಗತಿ. ಜಿಲ್ಲೆಯ ಸಂಸದರು ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಜಿಲ್ಲೆ ಹಾಗೂ ರಾಜ್ಯದ ಜನರ ನಿರೀಕ್ಷೆಗೂ ಮೀರಿ ಹೊಸ ಯೋಜನೆಗಳನ್ನು ತರಲು ಪ್ರಯತ್ನಿಸಬೇಕಿತ್ತು. ಜನರ ಮೇಲೆ ಕುಮಾರಸ್ವಾಮಿಗೆ ಕಾಳಜಿ ಇರಬೇಕು ಎಂದು ಹೇಳಿದರು.