Thursday, July 31, 2025
Google search engine

Homeರಾಜ್ಯರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರಕಾರ ಯೂರಿಯಾ ಪೂರೈಕೆಯಲ್ಲಿನ ವಿಳಂಬ ನೀತಿಯೆ ಪ್ರಮುಖ ಕಾರಣ: ಕೃಷಿ ಸಚಿವ...

ರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರಕಾರ ಯೂರಿಯಾ ಪೂರೈಕೆಯಲ್ಲಿನ ವಿಳಂಬ ನೀತಿಯೆ ಪ್ರಮುಖ ಕಾರಣ: ಕೃಷಿ ಸಚಿವ ಚಲುವರಾಯಸ್ವಾಮಿ

ಬೆಂಗಳೂರು : ‘ರಸಗೊಬ್ಬರ ಸಮಸ್ಯೆಗೆ ಕೇಂದ್ರ ಸರಕಾರ ಯೂರಿಯಾ ಪೂರೈಕೆಯಲ್ಲಿನ ವಿಳಂಬ ನೀತಿಯೆ ಪ್ರಮುಖ ಕಾರಣ. ಬರಗಾಲಕ್ಕೆ ಅನುದಾನ, ರಾಜ್ಯದ ನೀರಾವರಿ ಯೋಜನೆಗಳಿಗೆ ಅನುಮೋದನೆ ಸೇರಿ ಎಲ್ಲ ವಿಚಾರಗಳಲ್ಲಿ ಕೇಂದ್ರ ಸರಕಾರವು, ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದೆ’ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಇಂದಿಲ್ಲಿ ಆರೋಪ ಮಾಡಿದ್ದಾರೆ.

ಬುಧವಾರ ವಿಕಾಸಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಸಮಸ್ಯೆಗಳನ್ನು ಬಗೆಹರಿಸುವುದೇ ನಮ್ಮ ಮೊದಲ ಆದ್ಯತೆ. ರಾಜಕೀಯ ಟೀಕೆಗಳಿಗೆ ಉತ್ತರಿಸುವುದಕ್ಕಿಂತ ರೈತರಿಗೆ ನ್ಯಾಯ ಒದಗಿಸುವುದು ನಮಗೆ ಮುಖ್ಯ. ಹೀಗಾಗಿ ರಸಗೊಬ್ಬರ ಒದಗಿಸಲು ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ವಾಸ್ತವ ತಿಳಿಯಿರಿ: ವಿಪಕ್ಷ ನಾಯಕ ಆರ್.ಅಶೋಕ್, ‘ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕೆ ರಸಗೊಬ್ಬರ ರಫ್ತಾಗುತ್ತಿದೆ’ ಎಂಬ ಆರೋಪ ಮಾಡಿದ್ದಾರೆ. ಆದರೆ, ಶ್ರೀಲಂಕಾ ಹಾಗೂ ಬಾಂಗ್ಲಾ ಗಡಿ ಕೇಂದ್ರದ ನಿಯಂತ್ರಣದಲ್ಲಿರುತ್ತದೆ. ಹಾಗಾದರೆ ಕೇಂದ್ರದ ಭದ್ರತಾ ವೈಫಲ್ಯಕ್ಕೆ ಇವರ ಉತ್ತರವೇನು? ಎಂದು ಪ್ರಶ್ನಿಸಿದ ಚಲುವರಾಯಸ್ವಾಮಿ, ‘ಗೊತ್ತಿಲ್ಲದೇ ಆರೋಪ ಮಾಡುವ ಬದಲು ವಾಸ್ತವವನ್ನು ಅರಿತು ಮಾತಾಡಬೇಕು’ ಎಂದು ಸವಾಲು ಹಾಕಿದರು.

ಈ ವರ್ಷದ ಮುಂಗಾರು ಮುಂಚಿತವಾಗಿ ಆರಂಭವಾಗಿದ್ದು, 93 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಆರ್‌ಎಸ್ ಜಲಾಶಯ ಜುಲೈನಲ್ಲೇ ತುಂಬಿದೆ. ಕೇಂದ್ರದಿಂದ ಪೂರೈಕೆ ಆಗಿರುವ ಯೂರಿಯಾ ಗೊಬ್ಬರ ಸಹಿತ ಸುಮಾರು 12ಲಕ್ಷ ಮೆಟ್ರಿಕ್ ಟನ್ ಲಭ್ಯವಿತ್ತು. 3,46,499 ಮೆ.ಟನ್ ಹಳೆಯ ದಾಸ್ತಾನು ಹಾಗೂ ಕೇಂದ್ರದಿಂದ ಸರಬರಾಜು ಆಗಿರುವ 5,46,391 ಮೆ.ಟನ್ ರಸಗೊಬ್ಬರದಲ್ಲಿ 7,70,620 ಮೆ. ಟನ್ ಮಾರಾಟ ಮಾಡಲಾಗಿದ್ದು, ಜುಲೈ ಅಂತ್ಯದ ವೇಳೆಗೆ 1,26,000 ಮೆ.ಟನ್ ಯೂರಿಯಾ ದಾಸ್ತಾನು ಇದೆ ಎಂದು ತಿಳಿಸಿದರು.

ಎಲ್ಲ ಜಿಲ್ಲೆಗಳ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿಯೇ ರಸಗೊಬ್ಬರವನ್ನು ವಿತರಣೆ ಮಾಡಲಾಗಿದೆ. ಕೇಂದ್ರ ಸರಕಾರದಿಂದ ಸುಮಾರು 1.36 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಬಾಕಿ ಇದೆ. ಅದನ್ನು ನೀಡುವಂತೆ ಒತ್ತಾಯಿಸುತ್ತಿದ್ದೇವೆ. ಕೇಂದ್ರದ ಸಚಿವರಾದ ವಿ.ಸೋಮಣ್ಣ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಸಂಸದರಿಗೆ 10 ದಿನಗಳ ಹಿಂದೆ ಯೂರಿಯಾ ಕೊರತೆ ಬಗ್ಗೆ ಪತ್ರ ಬರೆದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ದೂರಿದರು.

ಪ್ರತಿಪಕ್ಷ ನಾಯಕ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೊಲ ಉತ್ತು, ಬಿತ್ತಿದ್ದಾರೋ ಇಲ್ಲವೋ ತಿಳಿಯದು. ಆದರೆ, ನಾನು ನಾಗಮಂಗಲದ ಸಣ್ಣ ಹಳ್ಳಿಯಿಂದ ಬಂದಿದ್ದೇನೆ. ಹೊಲವನ್ನು ಉತ್ತಿ, ಬಿತ್ತಿದ ಅನುಭವ ನನಗಿದೆ. ರೈತರ ಸಮಸ್ಯೆ ನನಗೆ ತಿಳಿದಿದೆ. ಹೀಗಾಗಿ ರಸಗೊಬ್ಬರ ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುತ್ತಿದ್ದೇವೆ. ರೈತರ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಆಟವಾಡುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಕೇಂದ್ರ ಸರಕಾರ ಮತ್ತು ಕೇಂದ್ರ ಸಚಿವರು ಹಾಗೂ ಬಿಜೆಪಿ ಸಂಸದರಿಗೆ ಕನಿಷ್ಟ ಬದ್ಧತೆ ಇದ್ದರೆ, ರಸಗೊಬ್ಬರ ಮತ್ತು ರೈತರ ವಿಚಾರದಲ್ಲಿ ಪ್ರತಿಭಟನೆ ಮತ್ತು ಹೋರಾಟ ಮಾಡುವುದನ್ನು ಬಿಡಬೇಕು. ಇವರಿಗೆ ನಿಜಕ್ಕೂ ರೈತರಪರ ಕಾಳಜಿ ಇದ್ದರೆ ಕೂಡಲೇ ಕೇಂದ್ರದಿಂದ ಸರಗೊಬ್ಬರ ಪೂರೈಕೆಗೆ ಒತ್ತಾಯ ಮಾಡಲಿ’ ಎಂದು ಚಲುವರಾಯಸ್ವಾಮಿ ಸವಾಲು ಹಾಕಿದರು.

RELATED ARTICLES
- Advertisment -
Google search engine

Most Popular