ಗುಂಡ್ಲುಪೇಟೆ: ಪಟ್ಟಣದ ಕೆಎಸ್‌ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ವೃದ್ಧೆ ಬಳಿ ಬಿಟ್ಟು ಹೋಗಿದ್ದ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು ಜಿಲ್ಲಾ ಕೇಂದ್ರದಲ್ಲಿರುವ ದತ್ತು ಕೇಂದ್ರಕ್ಕೆ ಬಿಟ್ಟಿದ್ದಾರೆ.
ಅಪರಿಚಿತ ತಾಯಿ ಬಿಟ್ಟು ಹೋಗಿದ್ದ ಒಂದು ವರ್ಷ ವಯಸ್ಸಿನ ಹೆಣ್ಣು ಮಗುವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎನ್.ಎಂ.ಸರಸ್ವತಿ ಮತ್ತು ಪೊಲೀಸರು ಬುಧವಾರ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ಇರಿಸಿದ್ದರು. ಈ ಸಂದರ್ಭದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರು ತಪಾಸಣೆ ನಡೆಸಿ ಮಗು ಆರೋಗ್ಯವಾಗಿದೆ ಎಂದು ತಿಳಿಸಿದ್ದರು. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸೂಚನೆ ಹಿನ್ನೆಲೆಯಲ್ಲಿ ಚಾಮರಾಜನಗರದ ಮಕ್ಕಳ ದತ್ತು ಕೇಂದ್ರಕ್ಕೆ ಮಗುವನ್ನು ಬಿಡಲಾಗಿದೆ ಎಂದು ಸಿಡಿಪಿಒ ಹೇಮಾವತಿ ತಿಳಿಸಿದರು.
ಪಟ್ಟಣದ ಕೆಎಸ್‌ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಬುಧವಾರ ಸಂಜೆ ಅಪರಿಚಿತ ಮಹಿಳೆ ಬಳಿ ಮಗು ಬಿಟ್ಟು ತಾಯಿ ನಾಪತ್ತೆಯಾಗಿರುವ ಘಟನೆ ತಾಲೂಕಿನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಷಯ ಎಲ್ಲೆಡೆ ಹರಿದಾಡಿತ್ತು. ಘಟನಾ ಸಂಬಂಧ ಕೇಸು ದಾಖಲಿಸಿಕೊಂಡಿರುವ ಸಬ್ ಇನ್ಸ್ ಪೆಕ್ಟರ್ ಸಾಹೇಬಗೌಡ ನೇತೃತ್ವದ ತಂಡ ಮಗುವಿನ ತಾಯಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಇನ್ನೂ ಕೂಡ ಯಾವುದೇ ಸುಳಿವು ದೊರೆತಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.