ಪ್ರಮುಖ ಕೇಸ್ ಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಜಾಮೀನು ಸಂದರ್ಭ ಶ್ಯೂರಿಟಿಯನ್ನು ಒದಗಿಸುವವರು ಎಚ್ಚರಿಕೆ ವಹಿಸದಿದ್ದರೆ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಅವರು ಶನಿವಾರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾಧ್ಯಮದವರ ಜತೆ ಮಾತನಾಡುವ ವೇಳೆ, ಮಂಗಳೂರಲ್ಲಿ ಕಳೆದ 6 ತಿಂಗಳಿನಿಂದ ದೀರ್ಘಾವಧಿಯ ಗಂಭೀರ ಪ್ರಕರಣಗಳಾದ ಕೊಲೆ, ಮತೀಯ ಗಲಭೆ ವೇಳೆ ಕಲ್ಲು ತೂರಾಟ, ಮತೀಯ ಕೊಲೆ ಯತ್ನ, ಅತ್ಯಾಚಾರ, ಗುಂಪು ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿರುವ ರೌಡಿ ಶೀಟರ್‌ಗಳನ್ನು ಹಿಡಿಯುವ ಉದ್ದೇಶದಿಂದ ಪೊಲೀಸರಿಂದ ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿಕೊಂಡು 1990ರಿಂದ 2023ರವರೆಗಿನ ಪ್ರಕರಣಗಳಡಿ ಕಳೆದ ಆರು ತಿಂಗಳಲ್ಲಿ 48 ಪ್ರಕರಣಗಳಲ್ಲಿ 38 ರೌಡಿಶೀಟರ್‌ಗಳನ್ನು ಗುರುತಿಸಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ನಕಲಿ ಶ್ಯೂರಿಟಿ ಒದಗಿಸಿದ ಪ್ರಕರಣಗಳೂ ಪತ್ತೆಯಾಗಿದ್ದು, ಅವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ರೌಡಿ ಶೀಟರ್‌ಗಳಿಗೆ ನಕಲಿ ಶ್ಯೂರಿಟಿಯಡಿ ಎರಡು ಪ್ರಕರಣಗಳು ದಾಖಲಾಗಿವೆ ಎಂದರು.



