Monday, May 26, 2025
Google search engine

Homeಸ್ಥಳೀಯಗ್ರಾಮ ವಾಸ್ತವ್ಯದ ಪರಿಕಲ್ಪನೆ ನಾಲ್ವಡಿ ಕೃಷ್ಣರಾಜರದ್ದು:ಸಾಹಿತಿ ಬನ್ನೂರು ರಾಜು 

ಗ್ರಾಮ ವಾಸ್ತವ್ಯದ ಪರಿಕಲ್ಪನೆ ನಾಲ್ವಡಿ ಕೃಷ್ಣರಾಜರದ್ದು:ಸಾಹಿತಿ ಬನ್ನೂರು ರಾಜು 

ಮೈಸೂರು: ನಾಡಿಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಅಪಾರವಾಗಿದ್ದು ದೀನ ದಲಿತರು, ಬಡಬಗ್ಗರು, ಹಿಂದುಳಿದವರು, ಶೋಷಿತರ ಬಗ್ಗೆ ವಿಶೇಷವಾಗಿ ಕಾಳಜಿ ಹೊಂದಿದ್ದ ಅವರು ಮಾರುವೇಷದಲ್ಲಿ ಮನೆ ಮನೆಗೆ, ಹಳ್ಳಿ ಹಳ್ಳಿಗಳಿಗೆ ಊರು ಕೇರಿಗಳಿಗೆ ಹೋಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ ಸ್ಪಂದಿಸುತ್ತಿದ್ದ ಅಪರೂಪದ ದೊರೆಯಾಗಿದ್ದು ಗ್ರಾಮ ವಾಸ್ತವ್ಯದಂತಹ ಪರಿಕಲ್ಪನೆಯನ್ನು ನಾಡಿಗೆ ಕೊಟ್ಟವರವರೆಂದು ಪತ್ರಕರ್ತರೂ ಆದ  ಸಾಹಿತಿ ಬನ್ನೂರು ಕೆ.ರಾಜು  ಅಭಿಪ್ರಾಯಪಟ್ಟರು.

    ಮೈಸೂರು ನಗರದ ನ್ಯೂ  ಸಯ್ಯಾಜಿರಾವ್ ರಸ್ತೆಯ ಬಳಿ ಇರುವ ಧರ್ಮಪ್ರಕಾಶ  ಡಿ. ಬನುಮಯ್ಯ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ140ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ  ನಾಲ್ವಡಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಸಾವಿರ ವರ್ಷಗಳ ಹಿಂದೆಯೇ ನಮ್ಮ ಆದಿಕವಿ ಪಂಪ ನುಡಿದ “ಮನುಷ್ಯ ಕುಲ ತಾನೊಂದೇ ವಲಂ” ಎಂಬ  ಮಾತನ್ನು ತಮ್ಮೊಳ್ಳಾಂತರಂಗದ ಧ್ಯೇಯವಾಕ್ಯ ಮಾಡಿಕೊಂಡು ಪ್ರಜೆಗಳಲ್ಲಿ ತಾರತಮ್ಯ ಮಾಡದೆ ಎಲ್ಲರನ್ನೂ ಒಂದೇ ರೀತಿ ಸಮಾನಭಾವದಿಂದ ಕಂಡವರು ನಾಲ್ವಡಿಯವರೆಂದರು.

  ಅವತ್ತಿನ ಕಾಲದಲ್ಲೇ ಅಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಸುಮಾರು 550ಕ್ಕೂ ಹೆಚ್ಚು ಸಂಸ್ಥಾನಗಳಿದ್ದು ಅಂದು ಯಾವ ಸಂಸ್ಥಾನಗಳೂ, ಯಾವ ಮಹಾರಾಜರೂ ಮಾಡಿರದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿ ನಾಲ್ವಡಿ ಅವರು  ದೇಶದ ಗಮನ ಸೆಳೆದಿದ್ದರು. ಜೊತೆಗೆ ಮಹಾತ್ಮ ಗಾಂಧೀಜಿ ಅವರಿಂದ “ರಾಜರ್ಷಿ” ಎಂದು ಕರೆಸಿಕೊಂಡು ತಮ್ಮ ಆಳ್ವಿಕೆಯ ಮೈಸೂರು ಸಂಸ್ಥಾನವನ್ನು ರಾಮರಾಜ್ಯವೆಂದು ಹೊಗಳಿಸಿಕೊಂಡಿದ್ದರು. ಅಲ್ಲದೆ ದೇಶದಲ್ಲಿ ಎಲ್ಲೆಡೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಅಭಿವೃದ್ಧಿ ಶೀಲ ಹೃದಯವಂತ ಮಹಾರಾಜರ ಆಳ್ವಿಕೆ ಇದ್ದಿದ್ದರೆ ನಮಗೆ ಸ್ವಾತಂತ್ರ್ಯವೇ ಬೇಕಾಗಿರಲಿಲ್ಲವೆಂದು ಗಾಂಧೀಜಿ ಅವರಿಂದ ಶಭಾಷ್ ಗಿರಿ ಪಡೆದಿದ್ದ ರಾಷ್ಟ್ರದ ಏಕೈಕ ಮಹಾರಾಜರಿವರು.

ಪುರುಷ ಪ್ರಧಾನ ಸಮಾಜದಲ್ಲಿ ಶೋಷಣೆಗೂಳಪಟ್ಟಿದ್ದ ಸ್ತ್ರೀಯರ ಬದುಕನ್ನು ಹಸನು ಗೊಳಿಸಲು ಸಾಮಾಜಿಕ ಅನಿಷ್ಠಗಳಾದ ಬಾಲ್ಯ ವಿವಾಹ ಸತಿ ಹೋಗುವಿಕೆ, ವರದಕ್ಷಿಣೆ ಪದ್ಧತಿ, ದೇವದಾಸಿ ಪದ್ಧತಿ, ಹೆಣ್ಣು ಬ್ರೂಣ ಹತ್ಯೆಯಂತಹ ಕ್ರೂರ ಪದ್ಧತಿಗಳನ್ನು ನಿಷೇಧ ಮಾಡುವುದರ ಜೊತೆಗೆ ವಿಧವಾ ವಿವಾಹ ಒಳಗೊಂಡಂತೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಕಡ್ಡಾಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ಮೈಸೂರು ಸಂಸ್ಥಾನವನ್ನು ದೇಶಕ್ಕೆ ಮಾದರಿಗೊಳಿಸಿದ್ದರು.

ಮೈಸೂರು ಸಂಸ್ಥಾನವನ್ನು ಆಳಿದ 25 ಮಹಾರಾಜರುಗಳ ಪೈಕಿ ಸುಮಾರು 40 ವರ್ಷಗಳ ಸುಧೀರ್ಘಕಾಲ ಮೈಸೂರು ಸಂಸ್ಥಾನವನ್ನು ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೃಷ್ಣರಾಜ ಭೂಪ ಮನೆ ಮನೆಯ ದೀಪ ಎಂದು ಹೆಸರಾಗಿ ರಾಜ ಪ್ರತ್ಯಕ್ಷ ದೈವ ಎಂಬ ಮಾತಿಗೆ ಅನ್ವರ್ಥವಾಗಿ ಏಳು ಜನ್ಮಕ್ಕಾಗುವಷ್ಟು ಅಭಿವೃದ್ಧಿ ಕೆಲಸವನ್ನು ಒಂದೇ ಜನ್ಮದಲ್ಲಿ ಮಾಡಿ ದಾಖಲೆ ಬರೆದಿದ್ದಾರೆ ಎಂದು ತಿಳಿಸಿದರು.

   ಖ್ಯಾತ ಆಶು ಕವಿ ಹಾಗೂ ಮುಕ್ತಕ ಕವಿ ಎಂ.ಮುತ್ತುಸ್ವಾಮಿ ಅವರು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕುರಿತಂತೆ ಆಶು ಕವಿತೆಗಳನ್ನು ಮತ್ತು ಮುಕ್ತಕಗಳನ್ನು ವಾಚಿಸಿ ಎಲ್ಲರ ಗಮನ ಸೆಳೆದು ನಾಲ್ವಡಿ ಯವರಿಗೆ ಗೌರವ ಸಲ್ಲಿಸಿದರು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ವಿಶ್ರಾಂತ ಶಿಕ್ಷಕ ಎ.ಸಂಗಪ್ಪ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಶಿಕ್ಷಕಿ ಮಂಗಳ ಗೌರಮ್ಮ ಸ್ವಾಗತಿಸಿದರೆ ಶಿಕ್ಷಕ ಎಂ.ಚೇತನ್ ವಂದನಾರ್ಪಣೆ ಮಾಡಿದರು. ಇಡೀ ಕಾರ್ಯಕ್ರಮವನ್ನು ಶಿಕ್ಷಕ ಎಂ.ಎಸ್. ಸತೀಶ್ ಅವರು ಅಚ್ಚುಕಟ್ಟಾಗಿ ನಿರೂಪಣೆ ಮಾಡಿದರು.

ಇದೇ ವೇಳೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೆನಪಿನಲ್ಲಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಾದ ಹತ್ತನೇ ತರಗತಿಯ ಬಿ.ರಚಿತಾ (ಪ್ರ), ಎಂಟನೇ ತರಗತಿಯ ವಿದ್ಯಾಶ್ರೀ (ದ್ವಿ) ಒಂಬತ್ತನೇ ತರಗತಿಯ ಸಿಂಚನಾ (ತೃ) ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಚಿತ್ರರಚನೆಯಲ್ಲಿ ಎಂಟನೇ ತರಗತಿಯ ಸುಪ್ರೀತ ವಿಶೇಷ ಬಹುಮಾನವನ್ನು ಗಳಿಸಿದ್ದು ಇವರೆಲ್ಲರಿಗೂ ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಬಹುಮಾನ ವಿತರಿಸಿದರು. ಶಾಲೆಯ ಮುಖ್ಯ ಶಿಕ್ಷಕ ಎಚ್.ಎಸ್. ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕರಾದ ಎಚ್. ಪಿ. ಹರೀಶ್, ಶ್ರೀನಿವಾಸಮೂರ್ತಿ, ಶಿವು ಮುಂತಾದವರಿದ್ದರು.

RELATED ARTICLES
- Advertisment -
Google search engine

Most Popular