ಬೆಂಗಳೂರು: ಚುನಾವಣೆಗೆ ಮುದ್ರಣಗೊಳ್ಳುವ ಕರಪತ್ರ, ಕಾಸಿಗಾಗಿ ಸುದ್ದಿ, ಸುಳ್ಳು ಸುದ್ದಿ, ಜಾತಿ, ಕೋಮುವಾದ ಪ್ರಚೋದಿಸುವ ಇತ್ಯಾದಿ ಸುದ್ದಿಗಳ ಮೇಲೆ ಚುನಾವಣಾ ಆಯೋಗವು ಹದ್ದಿನ ಕಣ್ಣಿಟ್ಟಿದೆ ಎಂದು ಅಪರ ಮುಖ್ಯ ಚುನಾವಣಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿಯಲ್ಲಿ(ಎಂಸಿಎಂಸಿ) ಟಿವಿ, ಚಾನೆಲ್, ಸಾಮಾಜಿಕ ಜಾಲತಾಣಗಳಲ್ಲಿ ಬರುವ ಜಾಹೀರಾತನ್ನು ಪ್ರಮಾಣಿಸಿ ಪ್ರಸಾರಕ್ಕೆ ಅನುಮತಿ ನೀಡಲಾಗುವುದು ಎಂದರು.
ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಬಗ್ಗೆಯೂ ಚುನಾವಣಾ ಆಯೋಗ ನಿಗಾವಹಿಸಿದ್ದು, ಇವು ವರದಿಯಾದರೆ ಜಿಲ್ಲಾ ಮಟ್ಟದಲ್ಲಿನ ಚುನಾವಣಾಧಿಕಾರಿಗಳು ಸಂಬಂಧಿಸಿದ ಅಭ್ಯರ್ಥಿಗಳಿಗೆ ೪೮ ಗಂಟೆಗಳೊಳಗೆ ನೋಟೀಸ್ ಜಾರಿ ಮಾಡುತ್ತಾರೆ. ಅನುಮತಿ ಪಡೆಯದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ವೆಂಕಟೇಶ್ ಕುಮಾರ್ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಮಾಧ್ಯಮವನ್ನು ನಾಲ್ಕನೇ ಅಂಗವೆಂದು ಪರಿಗಣಿಸಲಾಗಿದೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ಮಾಧ್ಯಮಗಳ ಭಾಗವಹಿಸುವಿಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಆಯೋಗ ಮತ್ತು ಮಾಧ್ಯಮ ಪರಸ್ಪರ ನಿಗಾವಹಿಸಿ ಕೆಲಸ ನಡೆಸಬೇಕಾಗಿದೆ ಎಂದು ವೆಂಕಟೇಶ್ ಕುಮಾರ್ ತಿಳಿಸಿದರು.