Thursday, December 25, 2025
Google search engine

Homeಸ್ಥಳೀಯಗ್ರಾಮದ ಹತ್ತಾರು ಜಾನುವಾರುಗಳನ್ನು ಬಲಿಪಡೆದ ಹುಲಿಯನ್ನು ಕೊನೆಗೂ ಸೆರೆ ಹಿಡಿದ ಅರಣ್ಯ ಇಲಾಖೆ

ಗ್ರಾಮದ ಹತ್ತಾರು ಜಾನುವಾರುಗಳನ್ನು ಬಲಿಪಡೆದ ಹುಲಿಯನ್ನು ಕೊನೆಗೂ ಸೆರೆ ಹಿಡಿದ ಅರಣ್ಯ ಇಲಾಖೆ

ಗುಂಡ್ಲುಪೇಟೆ : ತಾಲೂಕಿನ ದೇಪಾಪುರ ಸಮೀಪ ಗುರುವಾರ ಬೋನಿಗೆ ಬಿದ್ದ ನಾಲ್ಕು ವರ್ಷದ ಹೆಣ್ಣುಹುಲಿಯನ್ನು ಅರಣ್ಯ ಇಲಾಖೆ ಮೈಸೂರಿನ ಮೃಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿದರು.
ಕಳೆದ ವಾರ ಗ್ರಾಮದ ವೀರಭದ್ರಪ್ಪ ಎಂಬುವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಕೊಂದುಹಾಕಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ತುಮಕೂರು ಮಾದರಿಯ ಬೋನನ್ನು ಅಳವಡಿಸಿ ಒಳಗೆ ಕರುವನ್ನು ಕಟ್ಟಿಹಾಕಿದ್ದರು.

ಎಂದಿನಂತೆ ಅರಣ್ಯ ಸಿಬ್ಬಂದಿ ಕರುವಿಗೆ ಮೇವು ಹಾಗೂ ನೀರು ಸರಬರಾಜು ಮಾಡಲು ಹೋಗಿದ್ದಾಗ ಬೋನಿನಲ್ಲಿ ಹುಲಿ ಸೆರೆಯಾಗಿರುವುದು ಕಂಡುಬಂದಿತ್ತು.

ಹುಲಿ ನೋಡಲು ಮುಗಿಬಿದ್ದ ಗ್ರಾಮಸ್ಥರು,

ತಮ್ಮ ಗ್ರಾಮದಲ್ಲಿ ಹಲವಾರು ಜಾನುವಾರುಗಳನ್ನು ಕೊಂದು ಜನಜಾನುವಾರುಗಳ ಭೀತಿಗೆ ಕಾರಣವಾಗಿದ್ದ ಹುಲಿ ಬೋನಿಗೆ ಬಿದ್ದಿರುವುದನ್ನು ನೋಡಲು ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಭಾರೀ ಸಂಖ್ಯೆಯಲ್ಲಿ ಆಗಮಿಸಿದರು. ಜನರನ್ನು ನೋಡಿದ ಹುಲಿ ಬೋನು ಅಲುಗಾಡುವಂತೆ ಘರ್ಜಿಸುತ್ತಿತ್ತು. ಮೇಲೆ ಎಗರಿ ಕೆಳಗೆ ಬೀಳುತ್ತಿದ್ದ ಹುಲಿ ಎಲ್ಲಿ ಬೋನಿನಿಂದ ಹೊರಬರುತ್ತದೋ ಎಂಬ ಭೀತಿಗೆ ಕಾರಣವಾಗಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೆ.ಎಂ.ಮಹೇಶ್ ಹಾಗೂ ಸಿಬ್ಬಂದಿ ಜನರು ಬೋನಿನ ಹತ್ತಿರ ಹೋಗದಂತೆ ನಿಯಂತ್ರಿಸಿದರು.

ಸ್ವಲ್ಪ ಹೊತ್ತಿಗೆ ಲಾರಿ ಹಾಗೂ ಹೆಚ್ಚಿನ ಸಿಬ್ಬಂದಿ ಜತೆಗೆ ಸ್ಥಳಕ್ಕೆ ಆಗಮಿಸಿದ ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಹಾಗೂ ಪಶುವೈದ್ಯ ಡಾ.ಆದರ್ಶ್ ಹುಲಿಗೆ ಅರಿವಳಿಕೆ ನೀಡುವ ಬಗ್ಗೆ ಚರ್ಚಿಸಿದರು. ಬಂದೂಕಿನ ಮೂಲಕ ಅರಿವಳಿಕೆ ಮದ್ದು ನೀಡಿದ ನಂತರ ಪ್ರಜ್ನೆ ಕಳೆದುಕೊಂಡ ಹುಲಿಯನ್ನು ಲಾರಿಯಲ್ಲಿದ್ದ ಬೋನಿಗೆ ಸ್ಥಳಾಂತರಿಸಲಾಯಿತು.

ತಮ್ಮ ಗ್ರಾಮದ ಹತ್ತಾರು ಜಾನುವಾರುಗಳನ್ನು ಬಲಿಪಡೆದ ಹುಲಿಯನ್ನು ತಮಗೆ ತೋರಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದ ಪರಿಣಾಮ ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಒಬ್ಬೊಬ್ಬರಾಗಿ ಲಾರಿಯ ಮೇಲೆ ಹತ್ತಿ ಹುಲಿಯನ್ನು ನೋಡಲು ಅವಕಾಶ ಮಾಡಿಕೊಟ್ಟರು. ಹುಲಿಯನ್ನು ಮೈಸೂರಿನ ಮೃಗಾಲಯಕ್ಕೆ ಕಳಿಸಲಾಗುತ್ತಿದೆ ಎಂದು ಎಸ್.ಪ್ರಭಾಕರನ್ ತಿಳಿಸಿದರು.
ಇದೇ ಭಾಗದಲ್ಲಿ ಇನ್ನೂ ಎರಡು ಹುಲಿಗಳಿದ್ದು ಅವುಗಳನ್ನು ಸಹಾ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಕಳೆದ ವಾರ ಬೊಮ್ಮಲಾಪುರದಲ್ಲಿ ಕಾರ್ಯಾಚರಣೆ ನಡೆಸಿ ಹುಲಿ ಸೆರೆಹಿಡಿದಿದ್ದರೂ ಮತ್ತೊಂದು ಅಲ್ಲಿಗೆ ಬಂದಿದೆ. ಅದನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಿ ಎಂದು ವಡೆಯನಪುರ ಗ್ರಾಮದ ವಿ.ಎಸ್.ವಿಶ್ವಾಸ್ ಎಂಬುವರು ಪ್ರಭಾಕರನ್ ಅವರಿಗೆ ಮನವಿ ಮಾಡಿದರು.
ನಾವೇನೋ ಜನವಸತಿ ಪ್ರದೇಶಗಳಲ್ಲಿರುವ ಹುಲಿಗಳನ್ನು ಹಿಡಿಯಲು ಸಿದ್ದ. ಆದರೆ ನೀರಾವರಿ ಇಲಾಖೆ, ಸ್ಥಳೀಯ ಗ್ರಾಮಪಂಚಾಯಿತಿಗಳು ಕೆರೆಯಂಗಳ ಹಾಗೂ ಜಮೀನುಗಳಲ್ಲಿ ಬೆಳೆದಿರುವ ಪೊದೆಗಳನ್ನು ತೆರವು ಮಾಡಿದರೆ ಮಾತ್ರ ಹುಲಿಗಳು ಗ್ರಾಮಗಳ ಬಳಿ ಬರದಂತೆ ತಡೆಗಟ್ಟಬಹುದು. ಆದ್ದರಿಂದ ನೀವು ಸಹಾ ನಿಮ್ಮ ವ್ಯಾಪ್ತಿಯ ಗ್ರಾಮಪಂಚಾಯಿತಿಗಳ ಮೂಲಕ ಪೊದೆಗಳನ್ನು ತೆರವುಗೊಳಿಸಲು ಒತ್ತಾಯಿಸಿ ಎಂದು ಸಲಹೆ ನೀಡಿದರು.

RELATED ARTICLES
- Advertisment -
Google search engine

Most Popular