ವರದಿ : ಸ್ಟೀಫನ್ ಜೇಮ್ಸ್.
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು.
ರೈತರ ಪ್ರತಿಭಟನೆಯ ಕಿಚ್ಚು ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ, ಪ್ರತಿ ಟನ್ ಕಬ್ಬಿಗೆ 3,300 ರೂ ದರ ನಿಗದಿ ಮಾಡಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಸಕ್ಕರೆ ಕಾರ್ಖಾನೆ ಮಾಲೀಕರು ಈ ಬೇಡಿಕೆಯನ್ನು ತಿರಸ್ಕರಿಸಿದ್ದು, 3,500 ರೂಪಾಯಿ ನೀಡಿದರೆ ಭಾರಿ ನಷ್ಟವಾಗುತ್ತದೆ ಎಂದು ವಾದಿಸಿದ್ದರು.

ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರು ಇಂದು ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿ, ಪ್ರತಿ ಟನ್‌ಗೆ 3,300 ರೂಪಾಯಿಗಳನ್ನು ನಿಗದಿಪಡಿಸಿದ್ದಾರೆ.
ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ 3,200 ರೂಪಾಯಿಗಳಿಗಿಂತ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಅವರು ನಾವು ಸರ್ಕಾರದಿಂದ 50 ರೂ. ಸಬ್ಸಿಡಿ ನೀಡುತ್ತೇವೆ. ನೀವು 50 ರೂ. ಸೇರಿಸಿ ಪ್ರತಿ ಟನ್ ಕಬ್ಬಿಗೆ 3,300 ರೂಪಾಯಿ ನೀಡುವಂತೆ ಸೂಚಿಸಿದರು. ಇದಕ್ಕೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.
ಶೇ.11.25 ರಿಕವರಿ ಪ್ರಮಾಣದ ಕಬ್ಬಿಗೆ 3250 ರೂ. ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರ ಸಹ 50 ರೂ. ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕೊನೆಗೂ ಸರ್ಕಾರ 3300 ರೂ ನಿಗದಿಪಡಿಸಿದ್ದರಿಂದ ಪ್ರತಿಭಟನಾ ರೈತರಲ್ಲಿ ಸಂಭ್ರಮ ಮನೆ ಮಾಡಿದ್ದು, ಗುರ್ಲಾಪುರ ಕ್ರಾಸ್ ಬಳಿ ಕಳೆದ 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಒಟ್ಟಿನಲ್ಲಿ ಕಬ್ಬು ಬೆಳೆಗಾರರ ನಿರಂತರ ಪ್ರತಿಭಟನೆ ಫಲ ಕೊಟ್ಟಿದ್ದು, ಒಂದೊಳ್ಳೆ ಶುಭ ಸುದ್ದಿಯೊಂದಿಗೆ ಧರಣಿಗೆ ಕೊನೆ ಬಿದ್ದಿದೆ.



