Friday, January 23, 2026
Google search engine

Homeರಾಜಕೀಯರಾಜ್ಯಪಾಲರು ರಾಜ್ಯದ ಜನತೆಗೆ ಹಾಗೂ ಸದನಕ್ಕೆ ಕ್ಷಮೆ ಕೇಳಬೇಕು : ಹೆಚ್.ಕೆ.ಪಾಟೀಲ್

ರಾಜ್ಯಪಾಲರು ರಾಜ್ಯದ ಜನತೆಗೆ ಹಾಗೂ ಸದನಕ್ಕೆ ಕ್ಷಮೆ ಕೇಳಬೇಕು : ಹೆಚ್.ಕೆ.ಪಾಟೀಲ್

ಬೆಂಗಳೂರು : ಜಂಟಿ ಅಧಿವೇಶನದಲ್ಲಿ ಸರ್ಕಾರ ಸಿದ್ದಪಡಿಸಿದ ಭಾಷಣ ಮಾಡದೆ, ರಾಷ್ಟ್ರಗೀತೆಗೂ ಕಾಯದೆ ನಿರ್ಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರಾಜ್ಯದ ಜನತೆ ಹಾಗೂ ಸದನದ ಕ್ಷಮೆ ಕೇಳಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರು ಜಂಟಿ ಅಧಿವೇಶನದ ಭಾಷಣ ಪೂರ್ತಿ ಓದದೆ ತೆರಳಿದ್ದು ಶುಕ್ರವಾರವೂ ಕೋಲಾಹಲಕ್ಕೆ ಕಾರಣವಾಯಿತು‌. ಈ ಬಗ್ಗೆ ಆಡಳಿತ ಮತ್ತು ವಿಪಕ್ಷ ನಾಯಕರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವ ಹೆಚ್.ಕೆ ಪಾಟೀಲ್, ರಾಜ್ಯಪಾಲರಿಂದ ರಾಷ್ಟ್ರಗೀತೆಗೆ ಅಗೌರವ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆ ಇವೆ. ರಾಜ್ಯಪಾಲರು ರಾಷ್ಟ್ರಗೀತೆಗೆ ಕಾಯದೆ ತೆರಳಿದ್ದಾರೆ. ಸಂವಿಧಾನ ಸೆಕ್ಷನ್ 51 ಉಲ್ಲಂಘನೆ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನೂ ರಾಜ್ಯಪಾಲರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗಿದೆ. ಕಾನೂನು ಸಚಿವನಾಗಿ ಸಂವಿಧಾನದ ರಕ್ಷಣೆ ಮಾಡುವುದು ನನ್ನ ಕರ್ತವ್ಯ. ರಾಜ್ಯಪಾಲರಿಗೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ವಿರೋಧ ಪಕ್ಷದ ಸದಸ್ಯರು ಆರೋಪ ಮಾಡಿದ್ದಾರೆ. ಆದರೆ, ಮೇಲ್ಮನೆ ಸದಸ್ಯರ ಬಗ್ಗೆ ಇಲ್ಲಿ ಚರ್ಚೆ ಆಗುವುದು ಸಮಂಜಸ ಅಲ್ಲ ಎಂದರು.

ಇದೇ ವೇಳೆ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಗೀತೆಗೆ ಅವಮಾನ ಯಾರು ಮಾಡುವ ಹಾಗಿಲ್ಲ. ಪ್ರಧಾನಿ ಆಗಲಿ ರಾಷ್ಟ್ರಪತಿ ಆಗಲಿ ಯಾರೂ ಅವಮಾನ ಮಾಡುವ ಹಾಗಿಲ್ಲ.‌ ಆದರೆ ರಾಜ್ಯಪಾಲರು ರಾಷ್ಟ್ರಗೀತೆಗೆ ಅಪಮಾನ ಮಾಡಿದ್ದಾರೆ ಎಂದಿದ್ದಾರೆ.

ಈ ವೇಳೆ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಮಾತನಾಡಿ, ಮಾರ್ಷಲ್ ತಡೆಯದೆ ಇದ್ದರೆ ಅವರ ಮೇಲೆ ಸದಸ್ಯರು ಬಿದ್ದಿದ್ದರೆ ಏನಾಗ್ತಿತ್ತು ಸದನದ ಸ್ಥಿತಿ. ಬಿಜೆಪಿಗರು ಬಟ್ಟೆ ಹರಿದಿದ್ದಾರೆ ಎಂದಿದ್ದಾರೆ ಹರಿಪ್ರಸಾದ್, ಬಿಜೆಪಿಗರು ಮಾರ್ಷಲ್ ಡ್ರೆಸ್ ನಲ್ಲಿ ಇದ್ದಾರಾ? ಎಂದು ಸುರೇಶ್ ಕುಮಾರ್ ಪ್ರಶ್ನಿಸಿದರು. ಮುಂದುವರೆದು ಸದನದಲ್ಲಿ ನಿಮ್ಮ ಮಾತು ಎಂಟರ್ಟೈನ್ಮೆಂಟ್ ಆಗುವುದು ಬೇಡ. ರಾಜ್ಯಪಾಲರು ಎಂದರೆ ರಾಜ್ಯದ ಪಾಲರು. ಯಾರ ತಪ್ಪು ಯಾರದ್ದು ಸರಿ ಎಂದು ಆತ್ಮಾವಲೋಕನ ಮಾಡಿ ಮಾತನಾಡಬೇಕು ಎಂದು ಮನವಿ ಮಾಡಿದರು.

ರಾಜ್ಯಪಾಲರ ನಡೆ ಸಂವಿಧಾನದ ವಿರುದ್ಧವಾಗಿದೆ. ಇದನ್ನು ಸದನ ಸಹಿಸುವುದಿಲ್ಲ. ಸರ್ಕಾರದ ಕಾರ್ಯಕ್ರಮಗಳನ್ನು ಗವರ್ನರ್ ಬಾಯಿಂದ ಜನರು ಹಾಗೂ ಕೇಂದ್ರ ಸರ್ಕಾರಕ್ಕೆ ತಿಳಿಸುವ ಹಾದಿ ಇದಾಗಿದೆ. ನಾನು ಗವರ್ನರ್ ವಿರುದ್ಧ ಭಾಷಣದಲ್ಲಿ ಉಲ್ಲೇಖ ಮಾಡಿಲ್ಲ. ಆದರೆ ಅವರ ಬಾಧ್ಯತೆ ತಿರಸ್ಕರಿಸಿ ಭಾಷಣ ಮಾಡಿಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಸ್ಪೀಕರ್ ಮೇಲೆ ಕಾಗದ ಹರಿದು ಎಸೆದು ಸ್ಪೀಕರ್ ಸ್ಥಾನಕ್ಕೆ ಅವಮಾನ ಮಾಡಲಾಗಿತ್ತು. ಆ ಅಪರಾಧವನ್ನು ಜನರ ಮನಸ್ಸಿನಿಂದ ಅಳಿಸಲು ಇದೀಗ ಈ ಪ್ರಕರಣವನ್ನು ಬಳಸಲಾಗುತ್ತಿದೆ. ನಿಯಮಾವಳಿಯಂತೆ ನಡೆದುಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದರು. ರಾಜ್ಯಪಾಲರು ಸಂವಿಧಾನಕ್ಕೆ ಬದ್ಧರಾಗಿರಬೇಕು. ಅವರು ಸಂವಿಧಾನಕ್ಕೆ ಮೀರಿದವರಲ್ಲ. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಗಿಯಾಗಬೇಕು ಹಾಗೂ ಭಾಷಣ ಮಾಡಬೇಕು ಎಂದು ಸಂವಿಧಾನದ ಪರಿಚ್ಛೇದ 176(1) ರಲ್ಲಿ ಇದೆ. ಸುನೀಲ್ ಕುಮಾರ್ ಅವರು ಗೂಂಡಾ ಸರ್ಕಾರ ಅಂದರು, ಅದಕ್ಕೆ ಕ್ರಮ ಆಗಬೇಕು ಎಂದರೆ ಚರ್ಚೆ ಆಗುತ್ತಾ? ಎಂದು ಪ್ರಶ್ನಿಸಿದರು.

ದಕ್ಷಿಣ ಭಾರತದಲ್ಲಿರುವ ಬಿಜೆಪಿಯೇತರ ಸರ್ಕಾರ ಇರುವ ರಾಜ್ಯಗಳಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯಪಾಲರ ಕಚೇರಿಗೆ ಫೋನ್ ಕರೆ ಬರುವ ಬಗ್ಗೆಯೂ ನಾನು ಮಾತನಾಡಬೇಕಿದೆ ಎಂದರು. ಇದಕ್ಕೆ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿ, ಹಾಗಾದರೆ ಈ ಹಿಂದೆ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಗೂ ಫೋನ್ ಕರೆ ಬರುತ್ತಿತ್ತಾ, ಇದು ಚರ್ಚೆ ಆಗುತ್ತಾ? ಎಂದು ಪ್ರಶ್ನಿಸಿದರು. ಸ್ಪೀಕರ್ ಗೆ ಎಷ್ಟು ಫೋನ್ ಕರೆ ಹೋಗಿದೆ ಎಂಬ ಬಗ್ಗೆಯೂ ಮಾತನಾಡಿ ಎಂದು ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular