Tuesday, November 4, 2025
Google search engine

Homeರಾಜ್ಯಸುದ್ದಿಜಾಲದೇವಿತಂದ್ರೆ ಗ್ರಾಮದಲ್ಲಿ ಶ್ರೀ ಸಪ್ತಮಾತೃಕೆ ದೇವಿರಮ್ಮ ತಾಯಿಯ ಭವ್ಯ ರಥೋತ್ಸವ

ದೇವಿತಂದ್ರೆ ಗ್ರಾಮದಲ್ಲಿ ಶ್ರೀ ಸಪ್ತಮಾತೃಕೆ ದೇವಿರಮ್ಮ ತಾಯಿಯ ಭವ್ಯ ರಥೋತ್ಸವ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ದೇವಿತಂದ್ರೆ ಗ್ರಾಮದಲ್ಲಿ ಶ್ರೀ ಸಪ್ತಮಾತೃಕೆ ದೇವಿರಮ್ಮ ತಾಯಿಯ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ನಡುವೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ರಥೋತ್ಸವದ ಅಂಗವಾಗಿ ದೇವಾಲಯವನ್ನು ತಳಿರು ತೋರಣ, ಬಗೆ ಬಗೆಯ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ಮಾಡಲಾಯಿತು.

ಶನಿವಾರ ಸಂಜೆ ಸಿಡಿ ಮಹೋತ್ಸವ ಜರುಗಿತು. ಈ ಉತ್ಸವದಲ್ಲಿ ತಂದ್ರೆಯಿಂದ ಎರಡು ಹಾಗೂ ತಂದ್ರೆಅಂಕನಹಳ್ಳಿ ಮತ್ತು ಗೊಹಳ್ಳಿ ಗ್ರಾಮಗಳಿಂದ ತಲಾ ಒಂದು ಸಿಡಿಗಳನ್ನು ವಿಶೇಷ ಅಲಂಕಾರ ಮಾಡಿಕೊಂಡು ದೇವಾಲಯದ ಆವರಣಕ್ಕೆ ಕರೆತರಲಾಯಿತು. ನಂತರ ವಿಶೇಷ ಪೂಜೆಯನ್ನು ಸಲ್ಲಿಸಿ ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಸಿಡಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಶ್ರೀ ಸಪ್ತ ಮಾತೃಕೆ ದೇವಿರಮ್ಮ ತಾಯಿ ದೇವಾಲಯವನ್ನು ಮೂರು ಬಾರಿ ಪ್ರದಕ್ಷಣೆ ಮಾಡಿ ಸಿಡಿಗಳನ್ನು ಮೂಲ ಸ್ಥಾನಗಳಿಗೆ ಕರೆದೊಯ್ಯಲಾಯಿತು.

ಭಾನುವಾರ ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ದೇವರ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ ಧಾರ್ಮಿಕ ವಿಧಿ ವಿಧಾನಗಳಂತೆ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ದೇವಸ್ಥಾನ ಹಾಗೂ ರಥದ ಸುತ್ತ ಪ್ರದಕ್ಷಣೆ ಮಾಡಿದ ನಂತರ ರಥವನ್ನು ಶೃಂಗಾರ ಮಾಡಿ ದೇವರ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಶಾಸಕ ಡಿ.ರವಿಶಂಕರ್ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ದೇವಸ್ಥಾನದ ಸುತ್ತಲೂ ರಥವನ್ನು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರು ಎಳೆದು ತಂದರು. ಈ ಸಂದರ್ಭದಲ್ಲಿ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ರಥಕ್ಕೆ ಹಣ್ಣು ಜವನಗಳನ್ನು ಎಸೆಯುವ ಮೂಲಕ ಪ್ರಾರ್ಥಿಸಿದರು.

ರಥೋತ್ಸವದಲ್ಲಿ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ತುಮಕೂರು, ಕೊಡಗು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರುಗಳು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಜಾತ್ರೆಯ ಅಂಗವಾಗಿ ಹಣ್ಣು ಕಾಯಿ, ಬಳೆ, ಹೂವು, ಆಟಿಕೆ ಸಾಮಾನುಗಳು, ತಂಪು ಪಾನೀಯಗಳು, ಸಿಹಿ ತಿಂಡಿಗಳು, ಗೃಹ ಉಪಯೋಗಿ ವಸ್ತುಗಳ ಅಂಗಡಿಗಳು ತಲೆಯೆತ್ತಿ ಜನಾಕರ್ಷಣೆ ಮಾಡಿದ್ದು ವಿಶೇಷವಾಗಿತ್ತು.

ಮುಂಜಾಗ್ರತಾ ಕ್ರಮವಾಗಿ ಸಾಲಿಗ್ರಾಮ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶಶಿಕುಮಾರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಮಾಡಿದ್ದರು.

ದೇವತಾ ಕಾರ್ಯದಲ್ಲಿ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ.ರಮೇಶ್ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ವೆಂಕಟೇಶನಾಯಕ, ಮುಖಂಡರುಗಳಾದ ಮಹದೇವಪ್ಪ, ದೊಡ್ಡಕೊಪ್ಪಲು ಶಂಕರೇಗೌಡ, ತಂದ್ರೆಧರ್ಮ, ಅಪ್ಪುಶ್ರೀನಿವಾಸ್, ಕೆಡಗನಟರಾಜ್ ಸೇರಿದಂತೆ ಹಲವು ಗಣ್ಯರುಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular