ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಮಾಜದ ಏಳಿಗೆಗೆ ದುಡಿದು ಆದರ್ಶ ಪ್ರಾಯರಾದವರ ಜೀವನದ ತತ್ವ ಸಿದ್ದಾಂತ ಮತ್ತು ಮೌಲ್ಯಗಳನ್ನು ಪ್ರತಿಯೊಬ್ಬರು ತಮ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದಲ್ಲಿ ಭಾನುವಾರ ಕನಕ ಉತ್ಸವ ಸಮಿತಿಯ ವತಿಯಿಂದ ನಡೆದ ದಾಸಶ್ರೇಷ್ಠ ಭಕ್ತ ಕನಕದಾಸರ 538 ನೇ ಜಯಂತಿ ಮತ್ತು ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಧನಿಕನಾಗಿ ಜನಿಸಿ ಕನಕನಾದ ದಾಸಶ್ರೇಷ್ಠರ ಜೀವನ ಮತ್ತು ಸಾರ್ಥಕ ಬದುಕು ಜಗತ್ತಿಗೆ ಮಾದರಿಯಾಗಿದ್ದು ಅಂತಹ ಮಹಾ ಪುರುಷರಿಂದ ನಾಡು ಸಾಂಸ್ಕೃತಿಕವಾಗಿ ಶ್ರೀಮಂತವಾಗುವುದರ ಜತೆಗೆ ಕನ್ನಡದ ಕಂಪು ಜಗದಗಲ ಪಸರಿಸಿದೆ ಎಂದು ತಿಳಿಸಿದರು.
ಮಹಾ ಪುರುಷರ ಹೆಸರಿನಲ್ಲಿ ಜಯಂತಿ ಮಾಡಿ ಅವರ ಪ್ರತಿಮೆಗಳನ್ನು ಸ್ಥಾಪಿಸುವುದರೊಂದಿಗೆ ಅವರ ಜೀವನದ ಪಾಠಗಳು ಹಾಗೂ ಕಠಿಣ ಸವಾಲುಗಳನ್ನು ಅಧ್ಯಯನ ಮಾಡಿ ಇತರರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.
ಸುಳ್ಳು ಆರೋಪ ಮಾಡದಿರಿ
ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯಗಳನ್ನು ಸಹಿಸದೆ ಸುಳ್ಳು ಪ್ರಚಾರ ಮಾಡುವವರು ಆತ್ಮ ವಿಮರ್ಶೆ ಮಾಡಿಕೊಂಡು ಉತ್ತಮ ಕೆಲಸಗಳಿಗೆ ಸಹಕಾರ ನೀಡಬೇಕೆಂದು ಪರೋಕ್ಷವಾಗಿ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಚುನಾಯಿತರಾದವರ ಕೆಲಸ ಜನಸೇವೆ ಮಾಡಿ ಕ್ಷೇತ್ರವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯವುದಾಗಿದ್ದು ಇದನ್ನು ಅರಿತು ಜವಬ್ದಾರಿಯಿಂದ ನಡೆದುಕೊಳ್ಳಬೇಕೆಂದ ಅವರು ಸತ್ಯ ಮತ್ತು ಸುಳ್ಳಿನ ನಡುವಿನ ವ್ಯತ್ಯಾಸ ಜನರಿಗೆ ತಿಳಿದಿದೆ ಎಂದರು.
ಶಾಸಕ ಡಿ.ರವಿಶಂಕರ್ ಮಾತನಾಡಿ ಭಕ್ತ ಕನಕದಾಸರು ನಮಗೆಲ್ಲ ಪ್ರೇರಣಾ ಶಕ್ತಿ ಹಾಗೂ ಮಾರ್ಗದರ್ಶಕರಾಗಿದ್ದು ಅವರ ಜೀವನ ಸರ್ವರಿಗೂ ಸಂದೇಶವಾಗಿದೆ ಎಂದರು.
ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರು ಆದರ್ಶ ಪುರುಷರಾಗಿದ್ದು ಅವರ ಜೀವನದ ಕಠಿಣ ಸವಾಲು ಹಾಗೂ ಸಾಧನೆಯ ಹಿಂದಿನ ಪರಿಶ್ರಮವನ್ನು ಗಮನಿಸಿ ಅವುಗಳನ್ನು ಅರಿತು ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ಕೆಸ್ತೂರು ಗೇಟ್ ಬಳಿ ಕಾವೇರಿ ನದಿಯಿಂದ ಏತ ನೀರಾವರಿ ಯೋಜನೆಗೆ 60 ಕೋಟಿ ಹಣ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು ಇದರಿಂದ ಮಾವತ್ತೂರು, ಕೆಸ್ತೂರು, ಸಿದ್ದಾಪುರ ಮತ್ತು ಬ್ಯಾಡರಹಳ್ಳಿ ಗ್ರಾಮ ಪಂಚಾಯ್ರಿ ವ್ಯಾಪ್ತಿಗಳ ಕೆರೆಗಳಿಗೆ ನೀರು ತುಂಬಿಸಲು ಅನುಕೂಲವಾಗುತ್ತದೆ ಎಂದರು.
ಕೆಸ್ತೂರು ಕೊಪ್ಪಲು ಗ್ರಾಮದ ಹರಳಯ್ಯನ ಹಳ್ಳದ ಆಕ್ವಿಡೇಟ್ ಕಾಮಗಾರಿಗೆ 15 ಕೋಟಿ ಅನುದಾನ ನೀಡಿ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರ ಕೆಲಸ ಆರಂಬಿಸಲಾಗುತ್ತದೆಂದ ಶಾಸಕರು ಇದರ ಜತೆಗೆ ಗ್ರಾಮದಲ್ಲಿ ಕೆಪಿಎಸ್ ಶಾಲೆ ಆರಂಬಿಸಲಾಗುತ್ತದೆಂದು ಪ್ರಕಟಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತ ಕೆ.ಎನ್.ದಯಾನಂದ್ ಮಾತನಾಡಿ ಸಾಧನೆ ಮಾಡುವವರಿಗೆ ಸಾಂಸ್ಕೃತಿಕ ನಾಯಕರು ಮತ್ತು ಸಂಕಷ್ಠದಿಂದ ಮೆಲೇರಿದವರು ಸ್ಪೂರ್ತಿಯ ಸೆಲೆಯಯಾಗಬೇಕೆಂದರು.
ಕೆಸ್ತೂರು ಗ್ರಾ.ಪಂ.ಅಧ್ಯಕ್ಷೆ ಮಂಜುಳಶ್ರೀನಿವಾಸ್, ಮಾಜಿ ಅಧ್ಯಕ್ಷ ಜಗದೀಶ್, ತಾ.ಪಂ.ಮಾಜಿ ಅಧ್ಯಕ್ಷೆ ಹರಿಣಿಪ್ರಕಾಶ್, ಮಾಜಿ ಉಪಾಧ್ಯಕ್ಷ ಕೆ.ಎಸ್.ಅರವಿಂದ್, ಕ್ರಾಂತಿವೀರ ಆರ್ಟ್ಸ್ ಮಾಲೀಕ ಉಗರಗೋಳ ನಂದಕುಮಾರ್, ಕವಿರತ್ನ ಕಾಳಿದಾಸ ಯುವಕರ ಸಂಘದ ಗೌರವಾಧ್ಯಕ್ಷ ಕೆ.ಎಲ್.ರಂಗಸ್ವಾಮಿ, ಅಧ್ಯಕ್ಷ ಜಿ.ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಪಿ.ಶ್ರೀನಿವಾಸ್, ಖಜಾಂಚಿ ಮಹದೇವ, ಸಂಘಟನಾ ಕಾರ್ಯದರ್ಶಿ, ಕೆ.ಬಿ.ರಮೇಶ್, ಸಹ ಕಾರ್ಯದರ್ಶಿ ಕೆ.ಮಹೇಶ್, ನಿರ್ದೇಶಕರಾದ ಪಾಲಾಕ್ಷ, ಕೆ.ಎಸ್.ಸತೀಶ್, ಕೆ.ಹೆಚ್.ನಟರಾಜು, ಕೆ.ಭಾಸ್ಕರ್, ಕೆ.ಎಲ್.ದಿನೇಶ್, ಕೆ.ಆರ್.ನಗರ ಪುರಸಭೆ ಕಾನೂನು ಸಲಹೆಗಾರ ಬೀಚನಹಳ್ಳಿಮಹದೇವಸ್ವಾಮಿ ಮತ್ತಿತರರು ಇದ್ದರು.



