ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ಕಾನೂನು ಬಾಹಿರ ಚಟುವಟಿಕೆಗಳು ನಡೆದಿದ್ದು, ಬಗೆದಷ್ಟು ಅವ್ಯವಹಾರಗಳು ಬೆಳಿಕಿಗೆ ಬರುತ್ತಿವೆ ಎಂದು ಹೇಳಲಾಗುತ್ತಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡುವ ಮೂಲಕ 22.47 ಕೋಟಿ ರೂ. ಲಂಚ ಪಡೆದಿದ್ದಾರೆ ಎನ್ನಲಾಗುತ್ತಿದೆ.
ಈ ಬಗ್ಗೆ 2002 ರ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ನಡೆಸಲಾದ ತನಿಖೆಯಲ್ಲಿ, ಸುಮಾರು 700 ಕೋಟಿ ರೂ. ಮೌಲ್ಯದ 1,095 ಅಕ್ರಮ ನಿವೇಶನಗಳನ್ನು ಮಾರಾಟ ಮಾಡಲಾಗಿದ್ದು, 1,095 ನಿವೇಶನಗಳ ಪಟ್ಟಿಯನ್ನು ಮುಡಾ ಆಯುಕ್ತರು ಪರಿಶೀಲನೆ ಸಮಯದಲ್ಲಿ ಇಡಿಗೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ದಿನೇಶ್ ಕುಮಾರ್ ‘ಹಗರಣಗಳ ಸೂತ್ರಧಾರಿ’ ಗಳಲ್ಲಿ ಒಬ್ಬರು ಎಂದು ಇಡಿ ಹೇಳಿದ್ದು, ಅಕ್ರಮ ಹಂಚಿಕೆ ಮಾಡಿದ್ದಕ್ಕಾಗಿ ಅವರು ನಗದು, ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಪ್ರತಿಫಲವನ್ನು ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಅವ್ಯವಹಾರದ ಆದಾಯ ಸಂಪಾದನೆ ಮರೆಮಾಚುವಿಕೆ ಇತ್ಯಾದಿಗಳಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಉದ್ದೇಶಪೂರ್ವಕವಾಗಿ ಸಹಾಯ ಮಾಡಲು ಮಾಜಿ ಆಯುಕ್ತರು ಪ್ರಯತ್ನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಇನ್ನೂ ದಿನೇಶ್ ಕುಮಾರ್ ಪಡೆದ 22.47 ಕೋಟಿ ರೂ. ಲಂಚದಲ್ಲಿ 34.65 ಲಕ್ಷ ರೂ. ನಗದು ಸಂಗ್ರಹಿಸಿದ್ದು, ಹೆಚ್ಚಿನ ಭದ್ರತಾ ಬಾಂಡ್ ಪೇಪರ್‌ಗಳನ್ನು ದುರುಪಯೋಗಪಡಿಸಿಕೊಂಡು 8.28 ಕೋಟಿ ರೂ. ಗಳಿಸಿದ್ದಾರೆ ಹಾಗೂ ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಸದಸ್ಯರ ಮೂಲಕ 5.86 ಕೋಟಿ ರೂ, ಅಬ್ದುಲ್ ವಹೀದ್ ಅವರಿಂದ 3.62 ಕೋಟಿ ರೂ, ಕ್ಯಾಥೆಡ್ರಲ್ ಪ್ಯಾರಿಷ್ ಸೊಸೈಟಿಯಿಂದ 1.70 ಕೋಟಿ ರೂ, ನಿಂಗಮ್ಮ ಅವರಿಂದ 1.13 ಕೋಟಿ ರೂ, ಜೆಎಸ್‌ಎಸ್ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 1.02 ಕೋಟಿ ರೂ. ಮತ್ತು ನಿಂಗಮ್ಮ ಅವರಿಂದ 49 ಲಕ್ಷ ರೂ.ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪರಿಹಾರ ನಿವೇಶನಗಳಿಗೆ ‘ರಿಟರ್ನ್ಸ್’ ಆಗಿ ಪಡೆದಿದ್ದಾರೆ ಎಂದು ED ಅಂದಾಜಿಸಿದೆ.
ಅಲ್ಲದೇ ಈ ಅಕ್ರಮದಿಂದ ಬಂದ ಆದಾಯವನ್ನು ರವಾನಿಸಲು ಕುಮಾರ್ ಸಂಕೀರ್ಣ ವಿಧಾನವನ್ನು ಬಳಸಿದ್ದಾರೆ ಎಂದು ಕರ್ನಾಟಕ ಆಡಳಿತ ಸೇವೆಗಳ ಅಧಿಕಾರಿ ಕುಮಾರ್ ತಿಳಿಸಿದ್ದಾರೆ. ಕುಮಾರ್ ಮೇ 4, 2022 ರಿಂದ ಜುಲೈ 2, 2024 ರವರೆಗೆ ಸುಮಾರು 26 ತಿಂಗಳುಗಳ ಕಾಲ ಮುಡಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಅಕ್ರಮ ನಿವೇಶನ ಹಂಚಿಕೆ ಮತ್ತು ಅವುಗಳ ಮಾರಾಟದ ಮೂಲಕ ಬಂದ ಅನೈತಿಕ ಆದಾಯವನ್ನು ಹಲವಾರು ರಿಯಲ್ ಎಸ್ಟೇಟ್ ಉದ್ಯಮಿಗಳು ಅಥವಾ ದಲ್ಲಾಳಿಗಳು ಪಡೆದಿದ್ದಾರೆ ಎಂದು ಇಡಿ ಪ್ರಾಥಮಿಕವಾಗಿ ನಡೆಸಿದ ತನಿಖೆಯಿಂದ ಬಹಿರಂಗವಾಗಿದೆ. ಅವ್ಯವಹಾರದ ಒಟ್ಟಾರೆ ಆದಾಯವನ್ನು ಪತ್ತೆಹಚ್ಚಲು ಕುಮಾರ್ ಮತ್ತು ಭಾಗಿಯಾಗಿರುವ ಇತರ ವ್ಯಕ್ತಿಗಳ ಕೈಯಲ್ಲಿ ಹಣ ವರ್ಗಾವಣೆಯ ಅಪರಾಧದ ಬಗ್ಗೆ ಪುರಾವೆಗಳನ್ನು ಸಂಗ್ರಹಿಸಲು ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಬಿ.ಎಂ, ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ, ದೇವರಾಜು ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಐಪಿಸಿ, ಭ್ರಷ್ಟಾಚಾರ ತಡೆ ಕಾಯ್ದೆ, ಬೇನಾಮಿ ವಹಿವಾಟು ಕಾಯ್ದೆ ಮತ್ತು ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ದೂರು ದಾಖಲಿಸಿದ ನಂತರ, ಜಾರಿ ನಿರ್ದೇಶನಾಲಯವು ದಿನೇಶ್ ಕುಮಾರ್ ಅವರನ್ನು ಬಂಧಿಸಿದೆ. ಅವರು ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.



