Tuesday, July 8, 2025
Google search engine

Homeರಾಜ್ಯಸುದ್ದಿಜಾಲಅಡಗೂರಿನ ಹೆಮ್ಮೆ ದಿ. ಎ.ಬಿ. ಬಸವರಾಜು: ಅವರ ಸಾಧನೆ ಮತ್ತು ಸೇವಾ ಕಾರ್ಯ ಇತರರಿಗೆ ಮಾದರಿ...

ಅಡಗೂರಿನ ಹೆಮ್ಮೆ ದಿ. ಎ.ಬಿ. ಬಸವರಾಜು: ಅವರ ಸಾಧನೆ ಮತ್ತು ಸೇವಾ ಕಾರ್ಯ ಇತರರಿಗೆ ಮಾದರಿ -ಎಚ್.ವಿಶ್ವನಾಥ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಅಡಗೂರು ಗ್ರಾಮದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪದವಿ ಪಡೆದುಕೊಂಡು ಶಿಕ್ಷಕ ವೃತ್ತಿ ಆರಂಭಿಸಿ ಆನಂತರ ಉನ್ನತ ಹುದ್ಧೆಗಳನ್ನು ಅಲಂಕರಿಸಿ ಅವುಗಳನ್ನು ಸಮರ್ಥವಾಗಿ ನಿರ್ವಹಿಸಿ ನಮ್ಮೂರಿನ ಗೌರವವನ್ನು ಎತ್ತಿ ಹಿಡಿದಿದ್ದ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ದಿವಂಗತ ಎ.ಬಿ.ಬಸವರಾಜು ಅವರ ಸಾಧನೆ ಮತ್ತು ಸೇವಾ ಕಾರ್ಯ ಇತರರಿಗೆ ಮಾದರಿ ಎಂದು ವಿಧಾನ ಪರಿಷತ್ತಿನ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ಗ್ರಾಮದಲ್ಲಿ ನಡೆದ ದಿವಂಗತ ಎ.ಬಿ.ಬಸವರಾಜು ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಹಳ್ಳಿಗಳಲ್ಲಿ ಜನ್ಮ ತಾಳಿದವರು ಹುಟ್ಟೂರಿನ ಋಣ ತೀರಿಸುವ ಕೆಲಸ ಮಾಡಬೇಕಾದುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಮೈಸೂರು ಉತ್ತರ ವಿಭಾಗದ ಸಹಾಯಕ ಶಿಕ್ಷಣಾಧಿಕಾರಿಗಳಾಗಿಯೂ ಕಾರ್ಯ ನಿರ್ವಹಣೆ ಮಾಡಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವುದರ ಜತೆಗೆ ನಿವೃತ್ತರಾದ ನಂತರ ಜೆಎಸ್‌ಎಸ್ ಸಂಸ್ಥೆಯಲ್ಲಿಯೂ ಕೆಲಸ ನಿರ್ವಹಿಸಿದ ದಿ.ಎ.ಬಿ.ಬಸವರಾಜು ಅವರು ನಮ್ಮೂರಿನ ಹೆಮ್ಮೆ ಎಂದು ಕೊಂಡಾಡಿದರು.
ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸುವ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಉಳ್ಳವರು ಆರ್ಥಿಕವಾಗಿ ತೊಂದರೆಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದರ ಜತೆಗೆ ಸರ್ಕಾರಿ ಶಾಲೆಗಳ ಏಳಿಗೆಗೂ ಕೈಜೋಡಿಸಬೇಕೆಂದು ಸಲಹೆ ನೀಡಿದರು.

ಇಂದು ಗ್ರಾಮಾಂತರ ಪ್ರದೇಶದ ಮಕ್ಕಳು ಅತ್ಯಂತ ಕ್ಲಿಷ್ಠಕರ ಪರೀಕ್ಷೆಗಳನ್ನು ಎದುರಿಸಿ ಉತ್ತೀರ್ಣರಾಗಿ ಮಹತ್ವದ ಹುದ್ಧೆಗಳನ್ನು ಪಡೆಯುತ್ತಿದ್ದು, ಇದು ಎಲ್ಲರೂ ಖುಷಿಪಡುವ ವಿಚಾರ ಎಂದು ಸಂತಸ ವ್ಯಕ್ತಪಡಿಸಿದ ವಿಧಾನ ಪರಿಷತ್ತಿನ ಸದಸ್ಯರು ಸಂಸ್ಕ್ರತಿಯ ಬೀಡಾಗಿರುವ ಹಳ್ಳಿಗಳು ಪ್ರತಿಭಾವಂತರ ಕಣಜಗಳಾಗಿರುವುದು ಎಲ್ಲರೂ ಹೆಮ್ಮೆಪಡುವ ವಿಚಾರ ಎಂದು ನುಡಿದರು.

ದಶಕಗಳ ಹಿಂದೆಯೇ ಉನ್ನತ ಶಿಕ್ಷಣ ಪಡೆದು ಲಕ್ಷಾಂತರ ವಿದ್ಯಾರ್ಥಿಗಳ ಪಾಲಿಗೆ ದಾರಿ ದೀಪವಾಗಿದ್ದ ದಿ.ಎ.ಬಿ.ಬಸವರಾಜು ಅವರಂತಹವರು ಅಡಗೂರು ಗ್ರಾಮದಲ್ಲಿ ಜನಿಸಿದ್ದು ನಮ್ಮೆಲ್ಲರ ಪುಣ್ಯ ವಿಶೇಷ ಎಂದು ಕೊಂಡಾಡಿದ ಅವರು ಹಳ್ಳಿಯಲ್ಲಿ ಸಂತೃಪ್ತ ಜೀವನ ನಡೆಸುವುದು ಅತ್ಯಂತ ಖುಷಿಯ ವಿಚಾರ ಎಂದು ಬಣ್ಣಿಸಿದರು.

ತನ್ನೂರಿನ ಇತಿಹಾಸ ಮತ್ತು ರೀತಿ ರಿವಾಜುಗಳನ್ನು ತಿಳಿದುಕೊಂಡು ಗುರು ಹಿರಿಯರಿಗೆ ಗೌರವ ನೀಡಿ ಇತರರಿಗೆ ಮಾದರಿಯಾದ ಬದುಕು ಸಾಗಿಸುವುದನ್ನು ಎಲ್ಲರೂ ಕಲಿಯಿರಿ ಎಂದು ಕಿವಿಮಾತು ಹೇಳಿದರಲ್ಲದೆ ನಾನು ಅಡಗೂರು ಎಂಬ ಪುಸ್ತಕ ಬರೆಯುತ್ತಿದ್ದು, ಶೀಘ್ರದಲ್ಲಿಯೇ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಪ್ರಕಟಿಸಿದರು.

ಜಿ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ ಮಾತನಾಡಿ ನಮ್ಮೂರಿನ ಕಳಸಪ್ರಾಯರಾಗಿದ್ದ ದಿ.ಎ.ಬಿ.ಬಸವರಾಜು ಅವರು ಸಮಾಜ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದು, ಅಂತಹವರ ಸಂತತಿ ನೂರ್ಮಡಿಯಾಗಲಿ ಎಂದು ಹಾರೈಸಿದರು.

ನಿವೃತ್ತ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಸಂಗಪ್ಪ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಣ್ಣಲಿಂಗಪ್ಪ ಮಾತನಾಡಿ ದಿ. ಎ.ಬಿ.ಬಸವರಾಜು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ದಿ.ಎ.ಬಿ.ಬಸವರಾಜು ಅವರ ಪುತ್ರ ನಾಗೇಂದ್ರಕುಮಾರ್, ಗ್ರಾಮದ ಮುಖಂಡರಾದ ಎ.ಆರ್.ನಾಗರಾಜು, ಶ್ರೀಶೈಲ, ಪಟೇಲ್‌ಲಿಂಗರಾಜು, ವಿರೂಪಾಕ್ಷ, ಪಾಪಣ್ಣ, ನಾಗರಾಜು, ನಟರಾಜು, ವಿಜಯಕುಮಾರ್, ಕುಮಾರಸ್ವಾಮಿ, ಉಮೇಶ್, ಪೂರ್ಣಚಂದ್ರ, ರಾಜೇಂದ್ರ, ಪ್ರದೀಪ್, ತ್ರಿಪುರಾಂಭ, ಪ್ರೇಮಕುಮಾರಿ, ನೀಲಮ್ಮ, ರೇಣುಕಾ, ಪದ್ಮಮ್ಮ, ಸುಧಾ ಹಾಜರಿದ್ದರು.

RELATED ARTICLES
- Advertisment -
Google search engine

Most Popular