ಬೆಂಗಳೂರು : ಈ ದೇಶದ ಭವಿಷ್ಯಕ್ಕೆ ಬುನಾದಿ ಹಾಕುವಲ್ಲಿ ಇಂಜಿನಿಯರ್ ಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಇಂದು ಸೋಮವಾರ ಎಂಜಿನಿಯರುಗಳ ದಿನಾಚರಣೆ ಅಂಗವಾಗಿ ನಗರದ ಕೆ.ಆರ್. ವೃತ್ತದಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಮ್ಮ ತಂದೆ ನನ್ನನ್ನು ಇಂಜಿನಿಯರ್ ಮಾಡಬೇಕು ಎಂದು ಬಯಸಿದ್ದರು. ಆದರೆ ನಾನು ಸರಿಯಾಗಿ ಓದಲಿಲ್ಲ ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚಿದರು.
ಇಂದು ಸರ್.ಎಂ ವಿಶ್ವೇಶ್ವರಯ್ಯ ಅವರ ಜನ್ಮದಿನದ ಅಂಗವಾಗಿ ಅಭಿಯಂತರರ (ಎಂಜಿನಿಯರ್ಸ್) ದಿನ ಆಚರಿಸಲಾಗುತ್ತಿದೆ. ಸಚಿವನಾಗಿ ಜಿಬಿಎ ಹಾಗೂ ನೀರಾವರಿ ಇಲಾಖೆಯಲ್ಲಿರುವ ಇಂಜಿನಿಯರ್ ಗಳ ಜೊತೆ ಕೆಲಸ ಮಾಡುತ್ತಿದ್ದೇನೆ. ಈ ಹಿಂದೆ ನಗರಾಭಿವೃದ್ಧಿ ಹಾಗೂ ಇಂಧನ ಸಚಿವನಾಗಿದ್ದಾಗಲೂ ಕೆಲಸ ಮಾಡಿದ್ದೆ. ಇಂಜಿನಿಯರ್ ಗಳು ದೇಶ ನಿರ್ಮಿಸುವವರು ಎಂದು ಡಿಕೆಶಿ ಎಂಜಿನಿಯರುಗಳನ್ನು ಶ್ಲಾಘಿಸಿದರು.
ನಮ್ಮ ತಂದೆ ಆಸೆ ಈಡೇರಿಸಬೇಕು ಎಂದು ಇಂಜಿನಿಯರಿಂಗ್ ಕಾಲೇಜು ಆರಂಭಿಸಿದೆ. ನಮ್ಮ ಮನೆಯಲ್ಲಿ ಇಬ್ಬರು ಮಕ್ಕಳು ಇಂಜಿನಿಯರ್. ಒಬ್ಬರು ಸಿವಿಲ್ ಇಂಜಿನಿಯರ್ ಮತ್ತೊಬ್ಬರು ಎಲೆಕ್ಟ್ರಿಕಲ್ ಇಂಜಿನಿಯರ್ ಎಂದು ಇದೇ ವೇಳೆ ಡಿ.ಕೆ. ಶಿವಕುಮಾರ್ ತಿಳಿಸಿದರು.