ಗುಂಡ್ಲುಪೇಟೆ: ಕುಟುಂಬದವರ ಅನಿವಾರ್ಯತೆಗಾಗಿ ಮಕ್ಕಳನ್ನು ಕಾರ್ಮಿಕರಾಗಿ ದುಡಿಸುವ ಪ್ರವೃತ್ತಿ ಸರಿಯಲ್ಲ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಮತ್ತು ಹಿರಿಯ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಬಸವರಾಜ ತಳವಾರ ತಿಳಿಸಿದರು.
ಪಟ್ಟಣದ ಮಾನಸ ವಿದ್ಯಾಲಯ ಸಂಸ್ಥೆ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಹಾಗೂ ಮಾನಸ ವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಟುಂಬದವರು ಶ್ರೀಮಂತರು, ಬಡವರಾಗಿರಲಿ ಮಕ್ಕಳು ಬಾಲ್ಯವನ್ನು ಮುಕ್ತವಾಗಿ ಕಳೆಯುವ ವಾತವರಣ ಇರಬೇಕು. ಪ್ರಸ್ತುತ ಬಾಲ ಕಾರ್ಮಿಕ ಪದ್ಧತಿಗೆ ಜಾಗೃತಿಯ ಅನಿವಾರ್ಯತೆ ಇದೆ. ಹೀಗಾಗಿ ನಾನಾ ರೀತಿಯ ಕಾರ್ಯಕ್ರಮಗಳು, ಬೀದಿ ನಾಟಕಗಳನ್ನು ಹಮ್ಮಿಕೊಂದು ಮಕ್ಕಳ ಹಕ್ಕುಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.
ಬಾಲ ಕಾರ್ಮಿಕ ಪದ್ಧತಿ ತಡೆಯುವ ನಿಟ್ಟಿನಲ್ಲಿ 11 ಇಲಾಖೆಗಳು ಕೆಲಸ ಮಾಡುತ್ತಿವೆ. ಇದರೊಂದಿಗೆ ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕರು ಇತರೆ ಎಲ್ಲರೂ ಕೈ ಜೋಡಿಸಿದಾಗ ಬಾಲ ಕಾರ್ಮಿಕ ಪದ್ಧತಿ ನಿಯಂತ್ರಣದ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಬಾಲ ಕಾರ್ಮಿಕ ಪದ್ಧತಿ ಸಮಾಜಕ್ಕೆ ಕಂಟಕವಾಗುವ ಕಾರಣ ಈ ವಿಷಯದಲ್ಲಿ ಪ್ರತಿಯೊಬ್ಬರು ಜಾಗರೂಕರಾಗಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾದ ಜೆ.ಜಿ.ಶಿವಕುಮಾರ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯಿಂದ ಸಮಾಜಕ್ಕೆ ಆಸ್ತಿಯಾಗಬೇಕಾದ ಮಕ್ಕಳ ಭವಿಷ್ಯ ಮಂಕಾಗುತ್ತದೆ. ಆದ್ದರಿಂದ ನಿಮ್ಮ ಸುತ್ತಮತ್ತ ಬಾಲ ಕಾರ್ಮಿಕ ಪದ್ಧತಿ ಕಂಡು ಬಂದಲ್ಲಿ ಕೂಡಲೇ ಮಾಹಿತಿ ನೀಡಬೇಕು. ಇದರಿಂದ ಮಾತ್ರ ಈ ಅನಿಷ್ಟ ಪದ್ಧತಿಗೆ ಕಡಿವಣ ಹಾಕಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾನಸ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಜಿ.ಆರ್.ಗೋವಿಂದರಾಜು, ಅಪರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಎ.ಎನ್.ಕಾಂತಮ್ಮ, ಹಿರಿಯ ಕಾರ್ಮಿಕ ನಿರೀಕ್ಷಕಿ ಜಿ.ಬಿ.ವೀಣಾ, ವಕೀಲ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಉಪ ಪ್ರಾಂಶುಪಾಲರಾದ ನಾಗರತ್ನ, ವಕೀಲರ ಸಂಘದ ಕಾರ್ಯದರ್ಶಿ ಬಿ.ಪಿ.ಪುಟ್ಟಸ್ವಾಮಿ, ಮುಖ್ಯ ಶಿಕ್ಷಕಿ ನಾಗವೇಣಿ ಸೇರಿದಂತೆ ಇತರರು ಹಾಜರಿದ್ದರು.