ಹೈದರಾಬಾದ್: ಹಿಂದೂ ಸಮಾಜ ಭಾರತವನ್ನು ವಿಶ್ವದ ಕಲ್ಯಾಣಕ್ಕಾಗಿ ವಿಶ್ವ ಗುರುವನ್ನಾಗಿ ಮಾಡುವತ್ತ ದುಡಿಯಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಹಿಂದೂ ಸಂಘಟನೆಗಳ ಸಭೆಯಾದ ವಿಶ್ವ ಸಂಘ ಶಿಬಿರದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದೂಗಳು ಮತ್ತು ಸಂಘದ ಸ್ವಯಂ ಸೇವಕರು ಮಾನವ ಬುದ್ಧಿಶಕ್ತಿಯನ್ನು ಜಾಗತಿಕ ಕಲ್ಯಾಣದತ್ತ ಹೇಗೆ ನಿರ್ದೇಶಿಸಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕು. ಆದರ್ಶ ಧರ್ಮದ ಸ್ಥಾಪನೆಗೆ ಹಿಂದೂಗಳು ಒಂದಾಗಬೇಕು. ಸಾವಿರಾರು ವರ್ಷಗಳಿಂದ ಹಿಂದೂಗಳು ಮೆಕ್ಸಿಕೋದಿಂದ ಹಿಡಿದು ಸೈಬೀರಿಯಾದವರೆಗೆ ಯಾರ ಮೇಲೂ ದಾಳಿ ಮಾಡದೇ, ಯಾರ ಧರ್ಮವನ್ನೂ ಬದಲಾಯಿಸಿದೇ ಕೇವಲ ಜ್ಞಾನವನ್ನು ಹಂಚಿದ್ದಾರೆ ಎಂದು ಮೋಹನ್ ಭಾಗವತ್ ತಿಳಿಸಿದರು.
ಇನ್ನೂ ಜಗತ್ತು ಇಂದು ಭಾರತದತ್ತ ನೋಡುತ್ತಿದೆ. ಭಾರತ ಮತ್ತೆ ವಿಶ್ವಗುರುವಾಗಬೇಕು ಎಂಬುದು ಜಗತ್ತಿನ ಬಯಕೆಯಾಗಿದೆ. ಇದನ್ನು ಹಿಂದೂಗಳಿಂದ ಮಾತ್ರ ಸಾಧಿಸಲು ಸಾಧ್ಯ. ಜಾಗತಿಕ ಒಳಿತಿಗಾಗಿ ಹಿಂದೂ ತನ್ನ ಜ್ಞಾನ ಸಂಪತ್ತನ್ನು ವಿಶ್ವವೊಂದಿಗೆ ಹಂಚಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಂಘದ
ಸ್ವಯಂ ಸೇವಕರು ವ್ಯಕ್ತಿತ್ವ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಸಾಮಾಜಿಕ ಬದಲಾವಣೆಯನ್ನು ತರಲು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನೀತಿವಂತಿಕೆಯ ನಷ್ಟದಿಂದ ಕಳೆದುಹೋಗುವ, ಉಗ್ರವಾದದ ಉದಯಕ್ಕೆ ಕಾರಣವಾಗುವ ಮತ್ತು ಇತರ ಜಾಗತಿಕ ಸಮಸ್ಯೆಗಳಿಗೆ ಹಿಂದೂ ಸಮಾಜ ಪರಿಹಾರ ಒದಗಿಸುವ ಸಾಮರ್ಥ್ಯ ಹೊಂದಿದೆ ಅಲ್ಲದೆ ಹಿಂದೂಗಳು ತಮ್ಮ ಸೈನಿಕರನ್ನು ನಿಯೋಜಿಸುವ ಮೂಲಕ ಅಥವಾ ಆರ್ಥಿಕ ಶಕ್ತಿಯನ್ನು ಬಳಸಿಕೊಂಡು ಇತರರನ್ನು ನಿಗ್ರಹಿಸುವ ಮೂಲಕ ಜಗತ್ತನ್ನು ಮುನ್ನಡೆಸಿದ ಉದಾಹರಣೆ ಇಲ್ಲ. ಅವರೇನಿದ್ದರೂ ತಮ್ಮ ಜ್ಞಾನದ ಬಲದ ಮೇಲೆ ವಿಶ್ವವನ್ನು ಆಳುತ್ತಾರೆ ಎಂದು ಅಭಿಪ್ರಾಯಪಟ್ಟರು.
ಇನ್ನು ತಂತ್ರಜ್ಞಾನದ ಬೆಳವಣಿಗೆ ಮಾನವ ಕಲ್ಯಾಣಕ್ಕಾಗಿ ಪೂರಕವಾಗಿರಬೇಕು ಎಂದು ಹೇಳಿದ ಅವರು, AI ತಂತ್ರಜ್ಞಾನ ಯುಗದಲ್ಲೂ ಮನುಷ್ಯರೇ ತಂತ್ರಜ್ಞಾನದ ಮಾಲೀಕರಾಗಿಯೇ ಉಳಿಯುವ ಭರವಸೆ ವ್ಯಕ್ತಪಡಿಸಿದರು.
ಮಾನವ ಬುದ್ಧಿಶಕ್ತಿಯು ತಂತ್ರಜ್ಞಾನವನ್ನು ಜಗತ್ತಿನ ಕಲ್ಯಾಣಕ್ಕಾಗಿ ಬಳಸುವತ್ತ ಸಾಗುತ್ತದೆಯೇ ಹೊರತು ಇದಕ್ಕೆ ವಿರುದ್ಧವಲ್ಲ. ಭಾರತೀಯರು ತಮ್ಮ ತಂತ್ರಜ್ಞಾನ ಶಕ್ತಿಯನ್ನು ಜಾಗತಿಕ ಕಲ್ಯಾಣಕ್ಕಾಗಿ ಬಳಸಲಿದ್ದಾರೆ. ಭಾರತೀಯ ಸಮಾಜ ಜನಕಲ್ಯಾಣವನ್ನು ತನ್ನ ಮೂಲಮಂತ್ರವನ್ನಾಗಿಸಿಕೊಂಡು ಸಾವಿರಾರು ವರ್ಷಗಳೇ ಕಳೆದಿವೆ ಎಂದು ಹೇಳಿದರು.
ಈ ವೇಳೆ ಅಂತಾರಾಷ್ಟ್ರೀಯ ಹಿಂದೂ ಸಂಘಟನೆಗಳ ಸಭೆಯಾದ ವಿಶ್ವ ಸಂಘ ಶಿಬಿರವು ಡಿಸೆಂಬರ್ 25ರಂದು ಇಲ್ಲಿಗೆ ಹತ್ತಿರದ ಕನ್ಹಾ ಶಾಂತಿ ವನಂನಲ್ಲಿ ಪ್ರಾರಂಭವಾಯಿತು. ಹಿಂದೂ ಸ್ವಯಂಸೇವಕ ಸಂಘ, ಹಿಂದೂ ಸೇವಾ ಸಂಘ, ವಿಎಚ್‌ಪಿ ಮತ್ತು ಇತರ ಸಂಘಟನೆಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮೂರು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 2,000 ಪ್ರತಿನಿಧಿಗಳು ಭಾಗವಹಿಸಿದ್ದರು.
ಇನ್ನೂ ಈ ಸಭೆಯಲ್ಲಿ ಭಾರತಕ್ಕೆ ವಿಶ್ವಗುರು ಆಗುವ ಎಲ್ಲಾ ಸಾಮರ್ಥ್ಯ ಇದೆ ಎಂಬ ಮೋಹನ್ ಭಾಗವತ್ ಹೇಳಿಕೆ ಇದೀಗ ಎಲ್ಲೆಡೆ ಭಾರಿ ಚರ್ಚೆಗೀಡಾಗಿದೆ.



