Saturday, June 20, 2026
Google search engine

Homeರಾಜಕೀಯಜೆಡಿಎಸ್‌ನಲ್ಲಿ ದ್ರೋಹಕ್ಕೆ ಕ್ಷಮೆ ಇಲ್ಲ : ಅಡ್ಡ ಮತದಾನ ಮಾಡಿದ ಶಾಸಕರಿಗೆ ಶಿಸ್ತು ಕ್ರಮ ಶೀಘ್ರದಲ್ಲೇ...

ಜೆಡಿಎಸ್‌ನಲ್ಲಿ ದ್ರೋಹಕ್ಕೆ ಕ್ಷಮೆ ಇಲ್ಲ : ಅಡ್ಡ ಮತದಾನ ಮಾಡಿದ ಶಾಸಕರಿಗೆ ಶಿಸ್ತು ಕ್ರಮ ಶೀಘ್ರದಲ್ಲೇ : ಎಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು : ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್‌‍ ಶಾಸಕರಿಗೆ ನಿಮ್ಮ ಮುಂದಿನ ದಾರಿ ನೋಡಿಕೊಳ್ಳಿ ಎಂಬ ಸಂದೇಶವನ್ನು ಕೇಂದ್ರದ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ನೀಡಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ಚಲಾಯಿಸದೆ ಅಡ್ಡ ಮತದಾನ ಮಾಡಿದ ಜೆಡಿಎಸ್‌‍ ಶಾಸಕರ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಅವರು, ಪಕ್ಷದಲ್ಲಿದ್ದುಕೊಂಡು ನಂಬಿಕೆದ್ರೋಹ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಮೇಲ್ಮನೆ ಚುನಾವಣಾ ಫಲಿತಾಂಶದ ನಂತರ ವಿಧಾನಸಭಾ ಸದಸ್ಯರು ಹಾಗೂ ವಿಧಾನಪರಿಷತ್‌ ಸದಸ್ಯರು ಕುಮಾರಸ್ವಾಮಿಯವರನ್ನು ಭೇಟಿಯಾಗಿ ಅಡ್ಡಮತದಾನ ಮಾಡಿದ ಶಾಸಕರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆ ಸಂದರ್ಭದಲ್ಲಿ ಕುಮಾರಸ್ವಾಮಿಯವರು ಅಡ್ಡಮತದಾನ ಮಾಡಿರುವ ಶಾಸಕರು ಯಾರು ಎಂಬ ಮಾಹಿತಿ ಇದೆ. ಅವರು ಈಗಲೇ ತಮ್ಮ ಮುಂದಿನ ದಾರಿ ಯಾವುದೆಂದು ಗುರುತಿಸಿಕೊಂಡು ಹೊರಹೋಗುವುದು ಸೂಕ್ತ. ಜೊತೆಯಲ್ಲೇ ಇದ್ದು ದ್ರೋಹ ಬಗೆಯುವವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಮುಂದಿನ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಅಂತವರಿಗೆ ಪಕ್ಷದಿಂದ ಟಿಕೆಟ್‌ ಕೂಡಾ ನೀಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪಕ್ಷದ ವಿಪ್‌ ಅನ್ನು ಉಲ್ಲಂಘಿಸಿ ಆಮಿಷಕ್ಕೆ ಬಲಿಯಾಗಿ ಅಡ್ಡ ಮತದಾನ ಮಾಡಿದ್ದಾರೆ. ಅವರು ಯಾರೆಂಬುದೂ ಗೊತ್ತಿದೆ. ಅವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೆಂಬುದನ್ನು ಮುಂದೆ ನಿರ್ಧರಿಸುವುದಾಗಿ ಹೇಳಿದ್ದಾರೆ. ಶಾಸಕರೆಲ್ಲರೂ ಅಡ್ಡಮತದಾನ ಮಾಡಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದವರಿಗೆ ಯಾವುದೇ ರೀತಿ ಕ್ಷಮೆ ಇರಬಾರದು. ಕ್ರಮ ಕೈಗೊಳ್ಳಲೇಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಅಂತವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರವನ್ನು ಕುಮಾರಸ್ವಾಮಿಯವರಿಗೆ ನೀಡಿದ್ದಾರೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ಆದರೆ ಅಡ್ಡ ಮತದಾನ ಮಾಡಿರುವ ಶಾಸಕರ ಹೆಸರನ್ನು ಮಾತ್ರ ಬಹಿರಂಗಗೊಳಿಸಲಿಲ್ಲ. ಮುಂದೆ ತನ್ನಿಂದ ತಾನಾಗಿಯೇ ಅಂತವರ ಹೆಸರುಗಳು ಬಹಿರಂಗಗೊಳ್ಳುತ್ತವೆ. ಅವರಿಗೆ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಆಯಾ ಕ್ಷೇತ್ರದ ಜನರು ತಕ್ಕ ಪಾಠವನ್ನು ಚುನಾವಣಾ ಸಂದರ್ಭದಲ್ಲಿ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

RELATED ARTICLES
- Advertisment -
Google search engine

Most Popular