ವರದಿ: ಎಡತೊರೆ ಮಹೇಶ್
ಎಚ್.ಡಿ.ಕೋಟೆ: ಪುರಸಭೆ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳ ಹರಾಜು ಪ್ರಕ್ರಿಯೆ ಹಾಗೂ ತೆರಿಗೆ ಸಂಗ್ರಹದಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ್ ಸ್ಪಷ್ಟಪಡಿಸಿದರು.

ಹರಾಜು ಬಾಬ್ತುಗಳ ಸಾರ್ವಜನಿಕ ಬಹಿರಂಗ ಹರಾಜು ಮಾಡುವಲ್ಲಿ ಸರ್ಕಾರಿ ಸುತ್ತೋಲೆ ಹಾಗೂ ನಿಯಮಾವಳಿಗಳನ್ನು ಪುರಸಭೆಯ ಅಧಿಕಾರಿಗಳು ಪಾಲಿಸಿಲ್ಲ ಎಂದು ಪುರಸಭೆಯ ಕೆಲ ಸದಸ್ಯರು ಕಚೇರಿ ಮುಂಭಾಗ ಎರಡು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು.
ನಮ್ಮ ಇಲಾಖೆಯ ಅಧಿಕಾರಿಗಳ ಮೇಲೆ ಯಾವುದೇ ಆಧಾರಗಳಿಲ್ಲದೆ ಸುಖಾ ಸುಮ್ಮನೆ ಆರೋಪ ಮಾಡಿರುವುದು ಸತ್ಯಕ್ಕೆ ದೂರವಾದದ್ದು. ಸಾರ್ವಜನಿಕ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಸಭೆಯಲ್ಲಿ ಮಂಡಿಸಿ, ಅಧ್ಯಕ್ಷರ ಒಪ್ಪಿಗೆ ಪಡೆದ ನಂತರ ಒಂದು ತಿಂಗಳ ಮುಂಚಿತವಾಗಿ ಸ್ಥಳೀಯ ಸುದ್ದಿ ಪತ್ರಿಕೆಯಲ್ಲಿ ಜಾಹೀರಾತು ನೀಡಿ ಮಾಹಿತಿ ತಿಳಿಸಲಾಗಿದೆ ಎಂದು ತಿಳಿಸಿದರು.
ತೆರಿಗೆಗೆ ಸಂಬಂಧಿಸಿದಂತೆ ನಮ್ಮ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಸೆ.-ಅ. ತಿಂಗಳಲ್ಲಿ 1.18 ಲಕ್ಷದಷ್ಟು ತೆರಿಗೆ ಸಂಗ್ರಹವಾಗಿದೆ. ಬಾಕಿ ಉಳಿಸಿಕೊಂಡಿರುವವರಿಗೆ ನೊಟೀಸ್ ಜಾರಿ ಮಾಡಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ಚರಂಡಿ, ರಸ್ತೆಗಳನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸೇರಿದಂತೆ ಸದಸ್ಯರ ಸೂಚನೆಯಂತೆ ಅಭಿವೃದ್ಧಿ ಮಾಡುತ್ತಿದ್ದು, ಸಾರ್ವಜನಿಕರಿಗೆ ಜನಸ್ನೇಹಿಯಾಗಿ ನಮ್ಮ ಇಲಾಖೆಯ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ಕಂದಾಯ ಕಟ್ಟಿಸುವ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ನನ್ನ ಅವಧಿಯಲ್ಲಿ 1.18ಲಕ್ಷ ರೂ. ಆದಾಯ ಬಂದಿದೆ. ಪುರಸಭೆಯ ಕೆಲವು ಸದಸ್ಯರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ನಾವು ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಪತ್ರಿಕೆ ಹಾಗೂ ಕಚೇರಿಯ ನಾಮ ಫಲಕದಲ್ಲಿ ಮಾಹಿತಿ ನೀಡಿದ್ದೇವೆ.
-ರಾಣಿ, ಪುರಸಭೆ ಕಂದಾಯ ಅಧಿಕಾರಿ.