ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತಯಾರಿಸಿದ ಭಾಷಣದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಮಾನಕಾರಿ ವಿಷಯವೇನೂ ಇರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸ್ಪಷ್ಟಪಡಿಸಿದ್ದು, ಈ ಕುರಿತು ಕಲಬುರಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಷಣವನ್ನು ಓದದೇ ರಾಜ್ಯಪಾಲರು ಸದನವನ್ನು ತೊರೆಯುವುದು ಸಂವಿಧಾನ ವಿರೋಧಿ ನಡೆ ಎಂದು ಆರೋಪಿಸಿದರು.
ಈ ವೇಳೆ ರಾಜ್ಯಪಾಲರು ಶಾಂತವಾಗಿ ಸಂಪೂರ್ಣ ಭಾಷಣವನ್ನು ಓದಿ ನಂತರ ರಾಷ್ಟ್ರಗೀತೆಗೆ ಗೌರವ ಸಲ್ಲಿಸಬೇಕಿತ್ತು. ಅವರ ವರ್ತನೆ ಸಂವಿಧಾನಕ್ಕೆ ಅನುಗುಣವಾಗಿರಲಿಲ್ಲ. ಈ ಕುರಿತು ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಶಾಸಕ ಶರತ್ ಬಚ್ಚೇಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಇವರ ವಿರುದ್ಧ ಕ್ರಮಕ್ಕೆ ಆಗ್ರಹಿಸುವ ಬಿಜೆಪಿ ನಾಯಕರು, ರಾಷ್ಟ್ರಗೀತೆಗೆ ಗೌರವ ಸಲ್ಲಿಸದೇ ಹೊರನಡೆದ ರಾಜ್ಯಪಾಲರ ವಿರುದ್ಧ ಕ್ರಮಕ್ಕೆ ಏಕೆ ಆಗ್ರಹಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ತಯಾರಿಸಿದ ಭಾಷಣದಲ್ಲಿ ಅವಮಾನಕಾರಿ ಪದಗಳೇನಾದರೂ ಇದ್ದವೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರಗಳು, ನಾನು ಮತ್ತು ಸಿ.ಆರ್. ಪಾಟೀಲ ಅವರು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬರೆದಿರುವ ಪತ್ರಗಳು ಹಾಗೂ ಕೃಷ್ಣ ಬೈರೇಗೌಡ ಅವರು ಕೇಂದ್ರಕ್ಕೆ ಸಲ್ಲಿಸಿದ ರಾಜ್ಯದ ಬೇಡಿಕೆಗಳ ವಿವರಗಳು ಮಾತ್ರ ಭಾಷಣದಲ್ಲಿ ಸೇರಿದ್ದವು. ಕೇಂದ್ರ ಸರ್ಕಾರದ ವಿರುದ್ಧ ಅವಮಾನಕಾರಿ ವಿಷಯವೇನೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.
15ನೇ ಹಣಕಾಸು ಆಯೋಗದ ಅನುದಾನವನ್ನು ಪಂಚಾಯತ್‌ಗಳಿಗೆ ಬಿಡುಗಡೆ ಮಾಡುವಂತೆ ಕೇಳುವುದು ತಪ್ಪೇ? ಬಿವಿ-ಜಿ ರಾಮ್ ಜಿ ಅಡಿಯಲ್ಲಿ ರಾಜ್ಯದ ಪಾಲನ್ನು ಶೇ.40 ಎಂದು ನಿಗದಿ ಮಾಡಲಾಗಿದ್ದು, ಇದನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ರಾಜ್ಯದ ಅಭಿಪ್ರಾಯ ಕೇಳಲಾಗಿತ್ತೇ? ಇದನ್ನು ಪ್ರಶ್ನಿಸುವುದು ತಪ್ಪೇ? ಈ ವಿಷಯಗಳನ್ನು ರಾಜ್ಯಪಾಲರ ಮೂಲಕ ಜನರಿಗೆ ತಿಳಿಸುವುದು ತಪ್ಪೇ?” ಎಂದು ಪ್ರಶ್ನಿಸಿದರು.
ರಾಜ್ಯಪಾಲರು ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ಸೂಚನೆಯಂತೆ ಭಾಷಣ ಓದದೇ ಸದನದಿಂದ ಹೊರನಡೆದಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ರಾಷ್ಟ್ರಗೀತೆಯ ಮೇಲೆಯೇ ಗೌರವವಿಲ್ಲ ಎಂದು ಕಿಡಿಕಾರಿದ್ದಾರೆ.



