ಬೆಂಗಳೂರು: ಮಾದಕ ದ್ರವ್ಯಗಳ ಉತ್ತೇಜಿಸುವ ಅಥವಾ ಬೆಂಬಲಿಸುವ ವ್ಯಕ್ತಿಗಳು ಮನುಷ್ಯರಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಭಾನುವಾರ ಹೇಳಿದರು. ಮಾದಕ ದ್ರವ್ಯಗಳ ದುರುಪಯೋಗ ಮತ್ತು ಮಾರಾಟದ ವಿರುದ್ಧ ರಾಜ್ಯದ ಹೋರಾಟವನ್ನು ಬೆಂಬಲಿಸಲು ವಿಧಾನಸೌಧದಲ್ಲಿ ಆಯೋಜಿಸಲಾದ ವಿಂಟೇಜ್ ಕಾರು ರ್ಯಾಲಿಯಲ್ಲಿ ಈ ಕುರಿತು ಗೃಹ ಸಚಿವರು ಮಾತನಾಡಿದ್ದಾರೆ.
ಮಾದಕ ದ್ರವ್ಯಗಳನ್ನು ಉತ್ತೇಜಿಸುವವರು ಅಥವಾ ಬೆಂಬಲಿಸುವವರು ಮನುಷ್ಯರಲ್ಲ. ಇಂತಹವರು ಜನರ ಜೀವನ, ಭವಿಷ್ಯ ಮತ್ತು ಆರೋಗ್ಯವನ್ನು ನಾಶಪಡಿಸುತ್ತಾರೆಂದು ಕಿಡಿಕಾರಿದ್ದು, ಇದೇ ವೇಳೆ ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವಾಗಿಸಲು ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಬೆಂಗಳೂರು ನಗರ ಪೊಲೀಸರು ಫೆಡರೇಶನ್ ಆಫ್ ಹಿಸ್ಟಾರಿಕ್ ವೆಹಿಕಲ್ಸ್ ಆಫ್ ಇಂಡಿಯಾ ಮತ್ತು ಪಾಲ್ ಜಾನ್ ರೆಸಾರ್ಟ್ಸ್ ಮತ್ತು ಹೋಟೆಲ್‌ಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿಧಾನಸೌಧದಿಂದ ಪ್ರಾರಂಭವಾಗಿ ಮೈಸೂರು ರಸ್ತೆಯಲ್ಲಿ ಕೊನೆಗೊಂಡ ರ್ಯಾಲಿಯಲ್ಲಿ ನೂರಾರು ವಿಂಟೇಜ್ ಕಾರುಗಳು ಮತ್ತು ದ್ವಿಚಕ್ರ ವಾಹನಗಳು ಭಾಗವಹಿಸಿದ್ದವು. ಎಂಜಿ ರಸ್ತೆ ಮೆಟ್ರೋ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿಯೂ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
ರ್ಯಾಲಿಗೆ ಚಾಲನೆ ನೀಡುವ ಮೊದಲು ಮಾತನಾಡಿದ ಪರಮೇಶ್ವರ್ ಅವರು, ಕರ್ನಾಟಕವನ್ನು ಮಾದಕ ವಸ್ತು ಮುಕ್ತಗೊಳಿಸುವ ಸರ್ಕಾರದ ಘೋಷಣೆಯನ್ನು ರಾತ್ರೋರಾತ್ರಿ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಾವು ಮಾದಕ ವಸ್ತು ವಿರುದ್ಧ ಯುದ್ಧವನ್ನು ಪ್ರಾರಂಭಿಸಿದ್ದೇವೆ. ಕಳೆದ ವರ್ಷದಿಂದ, 300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಸಾವಿರಾರು ಜನರನ್ನು ಬಂಧಿಸಲಾಗಿದೆ. ದುರದೃಷ್ಟವಶಾತ್, ವಿದೇಶಗಳಿಂದ ಶಿಕ್ಷಣಕ್ಕಾಗಿ ಬರುವ ವಿದ್ಯಾರ್ಥಿಗಳು ಸಹ ಇಂತಹ ಅಪರಾಧಗಳಲ್ಲಿ ಭಾಗಿಯಾಗುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಾದಕ ವಸ್ತು ಮಾರಾಟಗಾರರು ಎಷ್ಟು ಅಮಾನವೀಯ ರಾಗಿದ್ದಾರೆಂದರೆ ಅವರು ಶಾಲೆಗಳಿಗೆ ಭೇಟಿ ನೀಡಿ ಚಾಕೊಲೇಟ್ ಎಂದು ಹೇಳಿ ಮಾದಕ ವಸ್ತುವನ್ನು ನೀಡುತ್ತಿದ್ದಾರೆ. ಆರಂಭದಲ್ಲಿ, ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ. ನಂತರ ವ್ಯಸನಿಗಳಾಗಿ ಮಾಡಿ, ಹಣ ಪಡೆಯುತ್ತಾರೆ. ಇದನ್ನ ನಿಯಂತ್ರಿಸಲು ಬೆಂಗಳೂರು ನಗರ ಪೊಲೀಸರು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಂದು ತಿಳಿಸಿದ್ದಾರೆ.



