ಬೆಂಗಳೂರು : ಮಳೆ ನೀರಿನ ಇಂಗು ಗುಂಡಿ ಶುಚಿಗೊಳಿಸುವ ವೇಳೆ ಮೂವರು ಮೃತಪಟ್ಟಿರುವ ಘಟನೆ ಶನಿವಾರ ವೈಟ್ಫೀಲ್ಡ್ ಠಾಣಾ ವ್ಯಾಪ್ತಿಯ ಇಮ್ಮಡಿಹಳ್ಳಿ ದೇಗುಲ ವೃತ್ತದ ಬಳಿ ನಡೆದಿದೆ.
ಮೃತರನ್ನು ಮುನಿಶಾಮಪ್ಪ (67), ರುದ್ರಕುಮಾರ್ (40) ಹಾಗೂ ವಿಶ್ವನಾಥ್ ಆಚಾರಿ (24) ಎಂದು ಗುರುತಿಸಲಾಗಿದೆ.
ಮನೆ ಮಾಲಕ ಮುನಿಶಾಮಪ್ಪ ಅವರು 12 ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಗು ಗುಂಡಿಯನ್ನು ಬಳಸುತ್ತಿರಲಿಲ್ಲ. ಕಾಲಕ್ರಮೇಣ ಗುಂಡಿಯಲ್ಲಿ ನೀರು ಹಾಗೂ ಕಸದ ವಸ್ತುಗಳು ಕೊಳೆತು ದುರ್ವಾಸನೆ ಉಂಟಾಗಿತ್ತು. ರಾಸಾಯನಿಕ ಸಿಂಪಡಿಸಿ ಶುಚಿಗೊಳಿಸಲು ಮುಂದಾದ ವೇಳೆ ಉಸಿರಾಟದ ತೊಂದರೆಯಾಗಿ ಅವರು ಮೂರ್ಛೆಗೊಂಡಿದ್ದಾರೆ.
ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್ ಕೂಡ ಮೂರ್ಛೆಗೊಂಡಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕನೂ ಮೂರ್ಛೆ ಹೋಗಿದ್ದಾರೆ. ವಿಶ್ವನಾಥ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದನು.
ಅಕ್ಕಪಕ್ಕದ ಮನೆಯವರು ಮೂವರನ್ನೂ ಖಾಸಗಿ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.



