ಗಾಜಿಯಾಬಾದ್ : ಆನ್‌ಲೈನ್ ಗೇಮ್ ಆಡಬೇಡಿ ಎಂದಿದ್ದಕ್ಕೆ ಮೂವರು ಅಪ್ರಾಪ್ತ ಸಹೋದರಿಯರು ಹೌಸಿಂಗ್ ಸೊಸೈಟಿಯ 9ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶ ಗಾಜಿಯಾಬಾದ್‌ನಲ್ಲಿ ನಡೆದಿದ್ದು, ಅಪ್ರಾಪ್ತ ಸಹೋದರಿಯರು ತಡರಾತ್ರಿ ತಾರಸಿಯಿಂದ ಕೆಳಗೆ ಹಾರಿದ್ದಾರೆ. ಅವರ ಪೋಷಕರು ಆನ್‌ಲೈನ್ ಗೇಮಿಂಗ್ ಆಡುವುದನ್ನು ವಿರೋಧಿಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಮೃತ ಬಾಲಕಿಯರನ್ನು ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ಎಂದು ಗುರುತಿಸಲಾಗಿದ್ದು, ಮೂಲಗಳ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಈ ಮೂವರು ಆನ್‌ಲೈನ್ ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರು. ಅಲ್ಲದೆ ಅವರು ಆನ್‌ಲೈನ್, ಟಾಸ್ಕ್ ಆಧಾರಿತ ಕೊರಿಯನ್ ಲವ್ ಗೇಮ್ ಆಡುತ್ತಿದ್ದರು ಎನ್ನಲಾಗಿದೆ.
ವರದಿಯ ಉಲ್ಲೇಖಿಸಿರುವ ಪ್ರಕಾರ, ವ್ಯಸನವು ಎಷ್ಟರ ಮಟ್ಟಿಗೆ ತಲುಪಿತ್ತೆಂದರೆ, ಹುಡುಗಿಯರು ಶಾಲೆಗೆ ಹೋಗುವುದನ್ನು ನಿಲ್ಲಿಸಿ, ಹೆಚ್ಚಿನ ಸಮಯವನ್ನು ಆಟದಲ್ಲಿ ಕಳೆಯುತ್ತಿದ್ದರು ಎಂದು ವರದಿಯಾಗಿದ್ದು, ಬೆಳಗಿನ ಜಾವ 2 ಗಂಟೆ ಸುಮಾರಿಗೆ ಗಾಜಿಯಾಬಾದ್‌ನ ವಸತಿ ಪಟ್ಟಣವಾದ ಭಾರತ್ ಸಿಟಿಯಲ್ಲಿ ಈ ಘಟನೆ ನಡೆದಿದೆ.
ಈ ವೇಳೆ ಬಾಲಕಿಯರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇನ್ನೂ ಘಟನೆಯ ಹಿಂದಿನ ನಿಖರವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾವಿಗೆ ಕಾರಣವಾದ ಸಂದರ್ಭಗಳ ಬಗ್ಗೆ ತಿಳಿಯಲು ಆತ್ಮಹತ್ಯೆ ಪತ್ರ ಅಥವಾ ಡಿಜಿಟಲ್ ಪುರಾವೆಗಳು ಲಭ್ಯವಿದೆಯೇ ಎಂದು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ.
ಹುಡುಗಿಯರು ಬಾಲ್ಕನಿಯಲ್ಲಿ ಪ್ಲಾಸ್ಟಿಕ್ ಕುರ್ಚಿಯನ್ನು ಇಟ್ಟು ಒಂಬತ್ತನೇ ಮಹಡಿಯಿಂದ ಒಬ್ಬೊಬ್ಬರಾಗಿ ಹಾರಿದ್ದಾರೆ. ಬಿದ್ದ ಕಾರಣ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಬ್ದ ಕೇಳಿ ಜನರು ಮತ್ತು ಕುಟುಂಬ ಸದಸ್ಯರು ಬರುವ ಹೊತ್ತಿಗೆ ಎಲ್ಲವೂ ಮುಗಿದಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವಗಳನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.



