ಗುಂಡ್ಲುಪೇಟೆ: ವಿದ್ಯುತ್ ಸ್ಪರ್ಶದಿಂದ ಸುಮಾರು 2ರಿಂದ 3 ವರ್ಷದ ಹುಲಿಯೊಂದು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಬಫರ್ ಜೋನ್ ವಲಯ ವ್ಯಾಪ್ತಿಯ ಪಡಗೂರು ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಪಡಗೂರು ಗ್ರಾಮದ ರವಿಚಂದ್ರ ಎಂಬುವರ ಜಮೀನನ್ನು ಕೇರಳ ಮೂಲದ ಪರಮೇಶ್ ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು. ಪಡಗೂರಿನ ಅಡವಿ ಮಠದ ಸಮೀಪದ ಜಮೀನಿನಲ್ಲಿ ಬಾಳೆ ಬೆಳೆ ಕಾವಲಿಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್ ತಂತಿಗೆ ಸಿಲುಕಿ ಸುಮಾರು 2ರಿಂದ 3 ವಯಸ್ಸಿನ ಹೆಣ್ಣು ಹುಲಿಯೊಂದು ಮೃತಪಟ್ಟಿದೆ.
ಪಡಗೂರು ಗ್ರಾಮದ ಸುತ್ತಮುತ್ತಲೂ ಹುಲಿ ಓಡಾಟ ಹೆಚ್ಚಳವಾಗಿದ್ದು, ಕಳೆದ ವಾರ ಪಡಗೂರಿನ ರೈತರೊಬ್ಬರ ಜಾನುವಾರು ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿತ್ತು. ಹುಲಿ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಗಳು ಬೋನ್ ಅಳವಡಿಸಿ ನಿಗಾ ವಹಿಸಿದ್ದರು. ಹುಲಿ ಸೆರೆ ಸಂಬಂಧ ಬಫರ್ ವಲಯದ ಅರಣ್ಯಾಧಿಕಾರಿಗಳು ಥರ್ಮಲ್ ಡ್ರೋನ್ ಹಾರಿಸುವಾಗ ವಿದ್ಯುತ್ ಸ್ಪರ್ಶದಿಂದ ಹುಲಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಮಾಹಿತಿ ಅರಿತ ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಎ.ಸಿ.ಎಫ್ ಸುರೇಶ್, ಡಿ.ಆರ್.ಎಫ್.ಓ.ಶಿವಕುಮಾರ್, ಸೇರಿದಂತೆ ಅರಣ್ಯಾಧಿಕಾರಿಗಳ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮಕೈಗೊಂಡು ಪ್ರಕರಣ ದಾಖಲಿಸಿದ್ದಾರೆ.



