ಮೈಸೂರು: ಮೈಸೂರಿನ ದಸರಾ ನಾಲ್ವಡಿ ಕೃಷ್ಣರಾಜ ಒಡೆಯರ್ ದಸರಾನ? ಇಲ್ಲ ತುಘುಲಕ್ ದರ್ಬಾರು ದಸರಾನ, ಸಾರ್ವಜನಿಕರಿಗೆ ದಸರಾ ಉದ್ಘಾಟನೆ ವೇಳೆ ನಿರ್ಬಂಧಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ದಸರಾವೆಂದರೆ ಮೈಸೂರು ಜನತೆಗೆ ಧರ್ಮಾತೀತವಾಗಿ, ಜಾತ್ಯಾತೀತವಾಗಿ ಎಲ್ಲರೂ ಸೇರಿ ಮಾಡುವ ಸಡಗರದ ಹಬ್ಬ. ಇಂಥ ಹಬ್ಬಕ್ಕೆ ಯಾವುದೋ ಪಕ್ಷ ಸಂಘಟನೆಗೆ ಮತ್ತು ಮಹಿಷಾಸುರ, ಭಕ್ತಾದಿಗಳಿಗೆ ಹೆದರಿ ಸಾರ್ವಜನಿಕರಿಗೆ ನಿರ್ಬಂಧಿಸಿರುವುದು ಸರಿಯಲ್ಲ. ಇದರಿಂದ ಸರ್ಕಾರ ತನ್ನ ಭದ್ರತೆ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯವರು ಚಾಮುಂಡಿ ಬೆಟ್ಟದ ನಿವಾಸಿಗಳಿಗೆ ಸಭೆಯನ್ನು ಕರೆದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ತಮ್ಮ ಮನೆಯಲ್ಲಿ ಯಾರಾದರೂ ಹೊಸದಾಗಿ ಬಂದರೆ ನಮಗೆ ತಿಳಿಸಬೇಕು.ತಾವೆಲ್ಲರೂ ಸಹ ಅಂದಿನ ದಿನ ಯಾರು ಹೊರಗೆ ಬರಬಾರದು ದಸರಾವನ್ನು ಟಿವಿಯಲ್ಲಿ ನೋಡಿಕೊಳ್ಳಬೇಕು ಎಂದು ತಾಕಿತ್ತು ಮಾಡಿದ್ದಾರೆ.
ಮೈಸೂರಿನ ಸಾರ್ವಜನಿಕರಿಗೂ ಸಹ ನಿರ್ಬಂಧಿಸಲಾಗಿದೆ. ಇದೆಲ್ಲವನ್ನು ನೋಡುತ್ತಿದ್ದರೆ ನಾವು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ನಡೆದಂತಹ ದಸರಾ ಯಾವುದು? ಈಗ ಮಾಡುತ್ತಿರುವ ಸರ್ಕಾರದ ದಸರಾ ತುಘಲಕ್ ದರ್ಬಾರಿನ ದಸರಾವಾಗಿದೆ ಎಂಬ ಸಂಶಯ ಮೂಡಿದೆ. ಯಾರೋ ದೊಣ್ಣೆ ನಾಯಕನಿಗೆ ಹೆದರಿ ಸಾರ್ವಜನಿಕರಿಗೆ ಪ್ರವೇಶ ಇಲ್ಲವೆಂದರೆ ಸರ್ಕಾರ ದಸರಾ ಉದ್ಘಾಟನೆಗೆ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ .ಇದನ್ನು ಕುರಿತು ಯಾರಾದರೂ ಪ್ರಶ್ನೆ ಮಾಡಿದರೆ ಅವರನ್ನು ಜೈಲಿಗೆ ತಳ್ಳುತ್ತಾರಂತೆ. ಈ ರೀತಿಯ ದಸರಾ ನಮಗೆ ಬೇಕಿತ್ತಾ ಎಂಬ ಯಕ್ಷಪ್ರಶ್ನೆ ಕಾಡುತ್ತಿದೆ. ಈಗಾಗಲೇ ಕನ್ನಡಪರ ಹೋರಾಟಗಾರರು ಮತ್ತು ಕೆಲವು ಸಾಹಿತಿಗಳು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಸ್ವಾಗತಿಸಿದರು. ಆದರೆ ಯಾರೋ ಮಾಡಿದ ತಪ್ಪಿಗೆ ಸಾರ್ವಜನಿಕರಿಗೆ ದಸರಾ ಉದ್ಘಾಟನೆ ವೇಳೆ ಅವಕಾಶ ಮಾಡಿ ಕೊಡದಿರುವುದು ಎಷ್ಟರ ಮಟ್ಟಿಗೆ ಸರಿ ?
ಇವೆಲ್ಲವನ್ನು ಗಮನಿಸಿದರೆ ದಸರಾ ಮೆರವಣಿಗೆಯಲ್ಲಿ ಲಕ್ಷಾಂತರ ಜನರಿಗೆ ಭದ್ರತೆ ಯಾವ ರೀತಿ ಕೊಡುತ್ತೀರಾ ಎಂಬುದೇ ಸಂಶಯವಾಗಿದೆ. ಹೋರಾಟಗಾರರು ಯಾರೂ ಉಗ್ರಗಾಮಿಗಳಲ್ಲ ಅವರೆಲ್ಲರನ್ನು ಕರೆದು ಸಭೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದದ್ದು ತಮ್ಮ ಕರ್ತವ್ಯ. ಇದನ್ನು ತಾವು ಮಾಡಲಿಲ್ಲವೆಂದರೆ ತಮ್ಮ ಮಂತ್ರಿಮಂಡಲ ಮತ್ತು ಅಧಿಕಾರಿಗಳುಭದ್ರತೆಯಲ್ಲಿ ವಿಫಲರಾಗಿದ್ದೀರಿ, ಜನ ರೊಚ್ಚಿಗೇಳುವ ಮುನ್ನ ಸಾರ್ವಜನಿಕರ ಸಭೆಯನ್ನು ಜಿಲ್ಲಾ ಉಸ್ತುವಾರಿ ಮತ್ತು ಜನಪ್ರತಿನಿಧಿಗಳಿಂದ ಸಭೆ ಕರೆಯಬೇಕು. ಇಲ್ಲವಾದರೆ ತಮಗೆ ಬಹಿಷ್ಕಾರ ಹಾಕುತ್ತಾರೆ. ತಾವುಗಳು ಆಷಾಢ ಮಾಸದಲ್ಲಿ ವಾಹನಗಳನ್ನು ಬೆಟ್ಟದ ಮೇಲಕ್ಕೆ ಬಿಡದೆ ಬಸ್ಸಿನ ಮೂಲಕ ಕಳಿಸುತ್ತಿದ್ದೀರಿ, ಅದೇ ರೀತಿ ಮಾಡಿ ಆಗ ತಮಗೆ ತಿಳಿಯುತ್ತದೆ. ಯಾರು ದಸರಾ ಉದ್ಘಾಟನೆಗೆ ಬಹಿಷ್ಕಾರ ಮಾಡುತ್ತಾರೆ ಎಂಬುದು ಅದನ್ನು ಬಿಟ್ಟು ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂದರೆ ತಮ್ಮ ಸರ್ಕಾರಕ್ಕೆ ಅವಮಾನವಾಗುತ್ತದೆ. ಈ ಕೂಡಲೇ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಸುತ್ತೋಲೆಯನ್ನು ಹೊರಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.