ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕಾರು ಬರೊಬ್ಬರಿ 7 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದು, ಅದಕ್ಕಾಗಿ ದಂಡ ಪಾವತಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು.. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸುವ ಕಾರು 2024ರಿಂದ ಈವರೆಗೆ ಏಳು ಬಾರಿ ಸೀಟ್‌ಬೆಲ್ಟ್ ಹಾಕದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವುದು ಜಂಕ್ಷನ್ ಗಳಲ್ಲಿ ಅಳವಡಿಸಿರುವ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಸಿದ್ದರಾಮಯ್ಯ ಅವರು ಕರ್ತವ್ಯದ ವೇಳೆ ಬಳಸುವ ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಾಗ ಸೀಟ್ ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿರುವ ದೃಶ್ಯಾವಳಿ ಐಟಿಎಂಎಸ್‌ನಲ್ಲಿ ಸೆರೆಯಾಗಿದೆ. ಈ ರೀತಿಯ ನಿಯಮ ಉಲ್ಲಂಘಿಸಿದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರ ಕಚೇರಿ 2,500 ಸಾವಿರ ರೂಗಳನ್ನು ದಂಡವಾಗಿ ಪಾವತಿಸಿದೆ.
ರಾಜ್ಯಾದ್ಯಾಂತ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶೇ 50ರ ರಿಯಾಯಿತಿ ಅಡಿ ದಂಡ ಪಾವತಿಸಲು ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದು, ಸಿದ್ದರಾಮಯ್ಯ ಅವರು ಬಳಸುತ್ತಿರುವ ಕಾರಿನ ಮೇಲಿನ ಪ್ರಕರಣಗಳ ಕುರಿತಂತೆ ದಂಡ ಪಾವತಿಯಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ. ಆರು ಪ್ರಕರಣಗಳಲ್ಲಿ ಮುಖ್ಯಮಂತ್ರಿ ಸೀಟ್ ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾರೆ. ಶೇ 50ರಷ್ಟು ರಿಯಾಯಿತಿ ಅನುಸಾರ ₹2,500 ದಂಡ ಪಾವತಿಸಿದ ಮೊತ್ತವಾಗಿತ್ತು.