ಕೊಪ್ಪಳ : ಇತ್ತೀಚಿಗೆ ಮಕ್ಕಳನ್ನು ತನ್ನ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಪ್ರವಾಸ ಕರೆದುಕೊಂಡು ಹೋಗಿ ಎಲ್ಲೆಡೆ ಸುದ್ದಿಯಾಗಿದ್ದ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯ ಬೀರಪ್ಪ ಅಂಡಗಿ ವರ್ಗಾವಣೆ ಹಿನ್ನೆಲೆ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಶಾಲಾ ಮುಖ್ಯ ಶಿಕ್ಷಕರನ್ನ ಕಳಸಲ್ಲ ಎಂದು ಶಾಲಾ ಗೇಟ್ ಬಂದ ಮಾಡಿ ಪ್ರತಿಭಟನೆ ಕೂಡ ಮಾಡಿದ್ದಾರೆ.
ಇನ್ನೂ ಬಹದ್ದೂರ ಬಂಡಿ ಗ್ರಾಮದ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಮುಖ್ಯೋಪಾಧ್ಯಾಯರಾಗಿ ಕೆಲಸ ಮಾಡುತ್ತಿದ್ದ ಇವರು ಇದೀಗ ಅಲ್ಲಿಂದ ವರ್ಗಾವಣೆಗೊಂಡಿದ್ದು, ಈ ಹಿನ್ನಲೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಶಾಲೆಯ ಗೇಟ್ ಬಂದ್ ಮಾಡಿ ನಮಗೆ ಬೀರಪ್ಪ ಸರ್ ಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ.
ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಅವರು ಇತ್ತೀಚಿಗೆ ತಮ್ಮ ಶಾಲೆಯ 24 ವಿದ್ಯಾರ್ಥಿಗಳನ್ನು ಸ್ವಂತ ಖರ್ಚಿನಲ್ಲಿ ವಿಮಾನದ ಮೂಲಕ ಪ್ರವಾಸಕ್ಕೆ ಕರೆದುಕೊಂಡು ಹೋಗಿರುವುದನ್ನು ರಾಜ್ಯಮಕ್ಕಳ ರಕ್ಷಣಾ ಆಯೋಗ ಅಭಿನಂದಿಸಿತ್ತು.
ಈ ಕುರಿತಂತೆ ಅಭಿನಂದನಾ ಪತ್ರ ಬರೆದ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಅವರು, ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿಯ ಕಾರ್ಯವನ್ನು ಶ್ಲಾಘಿಸಿದ್ದರು. ಬೀರಪ್ಪ ಅಂಡಗಿ ತಮ್ಮ ಶಾಲೆಯ 24 ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಜಿಂದಾಲ್ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಎರಡು ದಿನಗಳ ಕಾಲ ವಿಧಾನಸೌಧ, ಲಾಲ್‌ಬಾಗ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ತೋರಿಸಿದ್ದರು. ಈ ಕುರಿತಂತೆ ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಗಮನಿಸಿದ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೋಸಂಬೆ ಅವರು ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರ ಕಾರ್ಯವನ್ನು ಶ್ವಾಘಿಸಿ ಅಭಿನಂದನಾ ಪತ್ರ ಕಳುಹಿಸಿದ್ದರು.
ಬೀರಪ್ಪ ಅಂಡಗಿ ಅವರು ವಿದ್ಯಾರ್ಥಿಗಳಿಗೆ ವಿಮಾನಯಾನದ ಅವಕಾಶ ಕಲ್ಪಿಸಲು ಕಳೆದ ಏಪ್ರಿಲ್‌ನಲ್ಲಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದರು. ಅದರಲ್ಲಿ ತೇರ್ಗಡೆಯಾದ 24 ವಿದ್ಯಾರ್ಥಿಗಳನ್ನು ವಿಮಾನದ ಮೂಲಕ ಪ್ರವಾಸಕ್ಕೆ ಬೆಂಗಳೂರಿಗೆ ಕರೆದೊಯ್ಯಲಾಯಿತು. 220 ಮಕ್ಕಳು ಪರೀಕ್ಷೆ ಬರೆದಿದ್ದರು.
ಬೀರಪ್ಪ ಅಂಡಗಿ ಅವರು 3.5 ಲಕ್ಷ ರೂ. ವ್ಯಯಿಸಿ ಚಾರ್ಟರ್ಡ್ ವಿಮಾನವನ್ನು ಬುಕ್ ಮಾಡಿದ್ದರಂತೆ. ಬಳಿಕ, ಉಳಿದ ವೆಚ್ಚ ಸೇರಿ 5 ಲಕ್ಷ ರೂ. ವೆಚ್ಚ ಬರಬಹುದೆಂದು ಅವರು ತಿಳಿಸಿದ್ದರು. ಶಾಲೆಯ ಮಕ್ಕಳು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರಲ್ಲದೇ ಬಿಸಿಯೂಟ ನೌಕರರನ್ನೂ ಸೇರಿ 40 ಜನರನ್ನು ಬೆಂಗಳೂರಿಗೆ ವಿಮಾನದಲ್ಲಿ ಕರೆದೊಯ್ದಿದ್ದರು. ಬೀರಪ್ಪ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.



