ಬೆಂಗಳೂರು: ಸಾರಿಗೆ ನೌಕರರಿಗೆ 38 ತಿಂಗಳ ಭತ್ಯೆ ಮತ್ತು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್ 5ರಂದು ಬೆಳಿಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾಗಿದ್ದಾರೆ. ಜನವರಿಯಲ್ಲಿ 38 ತಿಂಗಳ ವೇತನ ಭತ್ಯೆ ಪಾವತಿಗೆ ಸರ್ಕಾರ ಭರವಸೆ ನೀಡಿದ್ದರೂ ಜುಲೈ ಅಂತ್ಯದವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕಾರಣದಿಂದ ಮುಷ್ಕರಕ್ಕೆ ತೀರ್ಮಾನಿಸಲಾಗಿದೆ.
ಜಂಟಿ ಕ್ರಿಯಾ ಸಮಿತಿ ಮುಖಂಡ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಮುಷ್ಕರ ನಡೆಯಲಿದ್ದು, ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಇಮೇಲ್ ಮೂಲಕ ಮುಷ್ಕರ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಜುಲೈ 7ರಂದು ಸಮಿತಿಯೊಂದಿಗೆ ಸಭೆ ನಡೆಸಿ, ಒಂದು ವಾರದಲ್ಲಿ ತೀರ್ಮಾನಮಾಡುವುದಾಗಿ ಹೇಳಿದ್ದರು. ಆದರೆ 11 ದಿನಗಳ ನಂತರವೂ ಸಭೆ ನಡೆಯದೆ ನಿರ್ಲಕ್ಷ್ಯದ ವಿರುದ್ಧ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟು 1.15 ಲಕ್ಷ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿರುವುದರಿಂದ ಸಾರ್ವಜನಿಕ ಸಾರಿಗೆಗೆ ತೀವ್ರ ಅಡಚಣೆ ಉಂಟಾಗುವ ಸಾಧ್ಯತೆ ಉಂಟಾಗಿದೆ.