ವಾಷಿಂಗ್ಟನ್: ಹೋದಲ್ಲಿ ಬಂದಲ್ಲಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ಬೇಡಿಕೆ ಇಡುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊನೆಗೂ ಒಂದು ಶಾಂತಿ ಪ್ರಶಸ್ತಿ ಸಿಕ್ಕಿದೆ. ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿಯನ್ನು ಟ್ರಂಪ್ ಅವರಿಗೆ ನೀಡಲಾಗಿದ್ದು, ವಾಷಿಂಗ್ಟನ್, D.C. ಯ ಕೆನಡಿ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ.
ಪ್ರಶಸ್ತಿ ಪ್ರಧಾನಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ನಾಯಕರ ಜೊತೆಗೆ ಮಾತನಾಡುತ್ತಿರುವ ಮತ್ತು ರಾಜತಾಂತ್ರಿಕ ಸಾಧನೆಯನ್ನು ಬಣ್ಣಿಸುವ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ವಿಡಿಯೋ ಆರಂಭದಲ್ಲಿ ಮೋದಿ ಮತ್ತು ಟ್ರಂಪ್ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ಸಹ ತೋರಿಸಲಾಯಿತು.
ಬಳಿಕ ಭಾಷಣದಲ್ಲಿ ಟ್ರಂಪ್, ಇದು ನಿಜಕ್ಕೂ ನನ್ನ ಜೀವನದ ಶ್ರೇಷ್ಠ ಗೌರವಗಳಲ್ಲಿ ಒಂದಾಗಿದೆ. ಪ್ರಶಸ್ತಿಗಿಂತಲೂ ಮುಖ್ಯವಾಗಿ ನಾವು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇವೆ ಇದಕ್ಕೆ ಕಾಂಗೋ ಉದಾಹರಣೆಯಾಗಿದೆ. ಹಾಗೂ ಭಾರತ, ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಹೇಳಿದರು.
ಫುಟ್‌ಬಾಲ್ ಇಂದು ಜಾಗತಿಕ ಕ್ರೀಡೆಯಾಗಿದೆ. ಈ ಕಾರಣಕ್ಕೆ ಜಾಗತಿಕ ಸಂಸ್ಥೆಯಾಗಿರುವ ಫಿಫಾ ಈ ವರ್ಷದಿಂದ ಶಾಂತಿ ಪ್ರಶಸ್ತಿಯನ್ನು ನೀಡುವುದಾಗಿ ಹೇಳಿಕೊಂಡಿದೆ ಎಂದಿದ್ದಾರೆ.
ಇದೀಗ ಟ್ರಂಪ್‌ಗೆ ಮೊದಲ ಫಿಫಾ ಶಾಂತಿ ಪ್ರಶಸ್ತಿ ನೀಡುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು, 500 ಕೋಟಿಗಿಂತಲೂ ಹೆಚ್ಚು ಫುಟ್‌ಬಾಲ್ ಅಭಿಮಾನಿಗಳ ಪರವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫಿಫಾ ಹೇಳಿಕೆ ನೀಡಿದೆ. ಆದರೂ ಕೆಲ ವಿಮರ್ಶಕರು ಜಾಗತಿಕ ಫುಟ್‌ಬಾಲ್ ಸಮಾರಂಭಗಳನ್ನು ರಾಜಕೀಯ ಸಂದೇಶದೊಂದಿಗೆ ವಿಲೀನಗೊಳಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.



