ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿದೇಶಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗಾಗಿ ಪ್ರಮುಖ ಘೋಷಣೆ ಮಾಡಿದ್ದಾರೆ. ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರಂಪ್ ಮಿಲಿಯನ್ ಡಾಲರ್ ಮೌಲ್ಯದ ಗೋಲ್ಡ್ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ. ಇದು ಹೊಸ ವೀಸಾ ಕಾರ್ಯಕ್ರಮವಾಗಿದ್ದು, ವಿದೇಶಿ ನಾಗರಿಕರು ನಿರ್ದಿಷ್ಟ ಮೊತ್ತವನ್ನು ಪಾವತಿಸುವ ಮೂಲಕ ಅಮೆರಿಕದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಂತಿಮವಾಗಿ ಪೌರತ್ವವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಹಾಗೂ ಅಮೆರಿಕದ ಕಂಪನಿಗಳು ಮತ್ತು ವಿದೇಶಿ ಪ್ರತಿಭೆಗಳಿಗೆ ಇದು ಒಂದು ಪ್ರಮುಖ ಅವಕಾಶ ಎಂದು ಟ್ರಂಪ್ ಬಣ್ಣಿಸಿದ್ದಾರೆ.
ಅಲ್ಲದೇ ಭಾರತ, ಚೀನಾ ಮತ್ತು ಇತರ ದೇಶಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅಮೆರಿಕದ ಉನ್ನತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆದು ನಂತರ ತಮ್ಮ ದೇಶಗಳಿಗೆ ಮರಳುವುದು ನಾಚಿಕೆಗೇಡಿನ ಸಂಗತಿ ಎಂದು ಟ್ರಂಪ್ ಹೇಳಿದ್ದಾರೆ. ಇಲ್ಲಿಯವರೆಗೆ ಪ್ರತಿಭಾನ್ವಿತರನ್ನು ಅಮೆರಿಕದಲ್ಲಿ ಉಳಿಸಿಕೊಳ್ಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಆದರೆ ಗೋಲ್ಡ್ ಕಾರ್ಡ್ ಅನ್ನು ಪ್ರಾರಂಭಿಸುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ ಎಂದಿದ್ದಾರೆ.
ಇನ್ನೂ ಅಮೆರಿಕಕ್ಕೆ ಗಮನಾರ್ಹ ಪ್ರಯೋಜನಗಳನ್ನು ಒದಗಿಸಬಲ್ಲ ವ್ಯಕ್ತಿಗಳಿಗೆ ಈ ಕಾರ್ಡ್ ನೀಡಲಾಗುತ್ತದೆ ಹಾಗೂ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿದ ಮತ್ತು ಅಮೇರಿಕನ್ ಕಂಪನಿಗಳು ಬಯಸುವ ವ್ಯಕ್ತಿಗಳನ್ನು ಉಳಿಸಿಕೊಳ್ಳುವುದು ಇದರ ಗುರಿಯಾಗಿದೆ. ಆದರೆ ಪ್ರಸ್ತುತ ವೀಸಾ ವ್ಯವಸ್ಥೆಯು ಅವರಿಗೆ ಹಾಗೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಟ್ರಂಪ್ ಪ್ರಕಾರ, ಕಂಪನಿಗಳು ಈಗ ಗೋಲ್ಡ್ ಕಾರ್ಡ್ ಖರೀದಿಸುವ ಮೂಲಕ ಅಮೆರಿಕದಲ್ಲಿ ತಮ್ಮ ಆಯ್ಕೆ ಮಾಡಿದ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಟ್ರಂಪ್ ಘೋಷಣೆಯ ಸಮಯದಲ್ಲಿ ಭಾರತೀಯ-ಅಮೆರಿಕನ್ ಐಬಿಎಂ ಸಿಇಒ ಅರವಿಂದ್ ಕೃಷ್ಣ ಮತ್ತು ಡೆಲ್ ಟೆಕ್ನಾಲಜೀಸ್ ಸಿಇಒ ಮೈಕೆಲ್ ಡೆಲ್ ಉಪಸ್ಥಿತರಿದ್ದರು. ಈ ಉಪಕ್ರಮವು ಅಮೆರಿಕದ ಕೈಗಾರಿಕೆಗಳಿಗೆ ಪ್ರಯೋಜನಕಾರಿ ಎಂದು ಇಬ್ಬರೂ ಬಣ್ಣಿಸಿದ್ದಾರೆ.



