ಯಳಂದೂರು: ದೇಶದಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬಂದ ನಂತರ ಕೇವಲ ಧರ್ಮ ಸಂಘರ್ಷದಲ್ಲೇ ಜನರು ಕಾಲ ದೂಡುವಂತೆ ಮಾಡಿದ್ದು ಪಕ್ಷಕ್ಕೆ ಪ್ರಮಾಣಿಕವಾಗಿ ದುಡಿದವರಿಗೆ ಮೂಲೆ ಗುಂಪು ಮಾಡಿ, ಕೋಮು ದ್ವೇಷವನ್ನು ಬಿತ್ತುವರಿಗೆ ಆದ್ಯತೆ ನೀಡುತ್ತಿದ್ದು ಇದನ್ನು ದೇಶದಿಂದ ಕಿತ್ತೊಗೆಯುವ ಸಂಕಲ್ಪವನ್ನು ಮತದಾರರು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡೆ ವಾಣಿ ಕೆ. ಶಿವರಾಂ ಕರೆ ನೀಡಿದರು.
ಅವರು ತಾಲೂಕಿನ ಯರಿಯೂರು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸುನೀಲ್ ಬೋಸ್ ಪರ ಮತಯಾಚನೆ ಮಾಡಿ ಮಾತನಾಡಿದರು. ನನ್ನ ಪತಿ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಪಕ್ಷ ಮೋಸ ಮಾಡಿತು. ಹಾಗಾಗಿ ನಾನು ಕಾಂಗ್ರೆಸ್ ಪಕ್ಷವನ್ನು ಸೇರಿದೆ. ಈ ಪಕ್ಷ ಬಡವರ ಪರವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಜನಮನ್ನಣೆ ಗಳಿಸಿದೆ. ಇದರಿಂದ ಬಡವರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಈ ಪಕ್ಷದ ತತ್ವ ಸಿದ್ಧಾಂತಗಳು ಬಡವರ ಪರವಾಗಿದ್ದು ನಾನು ಇಲ್ಲಿಗೆ ಸೇರಲು ಕಾರಣವಾಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಸುನೀಲ್ ಬೋಸ್‌ರನ್ನು ಆಯ್ಕೆ ಮಾಡುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಕೈಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಶಾಸಕ ಎ.ಆರ್. ಕೃಷ್ಣಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ಕಿನಕಹಳ್ಳಿ ಪ್ರಭುಪ್ರಸಾದ್, ಅಣಗಳ್ಳಿ ಬಸವರಾಜು, ಜನಪದ ಮಹೇಶ್ ಸೇರಿದಂತೆ ಅನೇಕ ಮುಖಂಡರು ಇದ್ದರು.