ಬೆಂಗಳೂರು: ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬಿಎಸ್‌ಎಫ್ ಕ್ಯಾಂಪಸ್ ಉದ್ಯೋಗಿ ಹಾಗೂ ಯೂಟ್ಯೂಬರ್ ಸಾವನ್ನಪ್ಪಿದ ಘಟನೆ ತಡರಾತ್ರಿ ಯಲಹಂಕ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಬಿಎಸ್‌ಎಫ್ ಕ್ಯಾಂಪಸ್ ಮುಂಭಾಗದ ರಸ್ತೆಯಲ್ಲಿ ನಡೆದಿದೆ. ಬಿಎಸ್‌ಎಫ್ ಕ್ಯಾಂಪಸ್ ಉದ್ಯೋಗಿ ಸುಧಾಕರ್ ಹಾಗೂ ಯೂಟ್ಯೂಬರ್ ಗಣಿ ಮೃತಪಟ್ಟಿದ್ದಾರೆ.
ವಾಹನಗಳ ಸುರಕ್ಷತೆ, ಕ್ಷಮತೆ, ಸಂಚಾರ ನಿಯಮಗಳ ಕುರಿತು ವ್ಲಾಗ್ ಮಾಡುತ್ತಿದ್ದ ಗಣಿ, ತನ್ನದೇ ಯೂಟ್ಯೂಬ್ ಚಾನೆಲ್ ಹೊಂದಿದ್ದರು. ತಡರಾತ್ರಿ ೧೧.೪೫ರ ಸುಮಾರಿಗೆ ತನ್ನ ರಾಯಲ್ ಎನ್‌ಫೀಲ್ಡ್ ಬೈಕ್ ನಲ್ಲಿ ವೇಗವಾಗಿ ಬರುತ್ತಿದ್ದರು. ಬಿಎಸ್‌ಎಫ್ ಕ್ಯಾಂಪಸ್‌ನಿಂದ ಬೈಕ್‌ನಲ್ಲಿ ಹೊರಬರುತ್ತಿದ್ದ ಸುಧಾಕರ್‌ಗೆ ಗಣಿ ಓಡಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಸುಧಾಕರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಣಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರೂ ಕೂಡ ಸಾವನ್ನಪ್ಪಿದ್ದಾರೆ.
ಇಬ್ಬರೂ ಸಹ ಹೆಲ್ಮೆಟ್ ಧರಿಸದೇ ಇದ್ದಿದ್ದು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.