ಚಾಮರಾಜನಗರ: ಮುಸುಕಿನ ಜೋಳದ ಫಸಲನ್ನು ರಕ್ಷಣೆ ಮಾಡಲು ತಂತಿಗೆ ಅಕ್ರಮವಾಗಿ ಬಿಟ್ಟಿದ್ದ ವಿದ್ಯುತ್ ಗೆ ಸಿಲುಕಿ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟ ದುರ್ಘಟನೆ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೃಷ್ಣ (43) ಹಾಗೂ ಸ್ವಾಮಿಶೆಟ್ಟಿ(40) ಮೃತಪಟ್ಟ ದುರ್ದೈವಿಗಳು. ಇವರು ಅದೇ ಗ್ರಾಮದ ವ್ಯಕ್ತಿಯೊಬ್ಬರ ಜಮೀನಿಗೆ ತೆಂಗಿನಕಾಯಿ ಕೀಳಲು ಮಂಗಳವಾರ ತೆರಳಿದ್ದರು. ಈ ವೇಳೆ ಜಮೀನಿನಲ್ಲಿ ಅಕ್ರಮವಾಗಿ ಬಿಟ್ಟಿದ್ದ ವಿದ್ಯುತ್ ತಗುಲಿ ಸ್ಥಳದಲ್ಲೇ ಇಬ್ಬರು ಅಸುನೀಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ, ಡಿವೈಎಸ್ಪಿ ಸ್ನೇಹರಾಜ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಹಾಗೂ ಸೆಸ್ಕಾಂ ನ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೃತದೇಹಗಳನ್ನು ಯಡಬೆಟ್ಟದ ಬಳಿ ಇರುವ ಸಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಯಿತು.
ಈ ಪ್ರಕರಣ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.
ಜಮೀನನಲ್ಲಿ ಬೆಳೆದಿದ್ದ ಫಸಲನ್ನು ರಕ್ಷಣೆ ಮಾಡಲು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಗುಲಿ ಕೂಲಿ ಕಾರ್ಮಿಕರು ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಈ ಜಮೀನಿನ ಮೂಲ ಮಾಲೀಕರಾದ ಲಿಂಗಣ್ಣಾಚಾರ್(ಪ್ರಕಾಶ್) ಎಂಬುವವರು ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಗುತ್ತಿಗೆಗೆ ನೀಡಿರುವುದಾಗಿ ಹೇಳುತ್ತಿದ್ದು, ಆ ಸಂಬಂಧ ಅಗತ್ಯ ದಾಖಲೆಗಳನ್ನು ನೀಡಿದರೆ ಗುತ್ತಿಗೆದಾರನ ವಿರುದ್ಧ ಕ್ರಮವಹಿಸಲಾಗುವುದು. ಇಲ್ಲದಿದ್ದಲ್ಲಿ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು.
– ಡಾ.ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.