ಬೆಳಗಾವಿ: ಬಸ್‌ನಲ್ಲಿ ಕಿಟಕಿ ಪಕ್ಕದ ಸೀಟಿಗಾಗಿ ಉಂಟಾದ ತರ್ಕವು ಚಾಕು ಇರಿತದ ಯತ್ನಕ್ಕೆ ತಿರುಗಿದ ಭಯಾನಕ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಅಪ್ರಾಪ್ತರನ್ನು ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಪಂತ ಬಾಳೇಕುಂದ್ರಿ ಬಸ್‍ನಲ್ಲಿ ಕಿಟಕಿ ಪಕ್ಕದ ಸಿಟಿಗಾಗಿ ಬಂಧಿತ ಬಾಲಕ ಹಾಗೂ ಯುವಕ ಮಾಜ್ ಸನದಿ (20) ಮಧ್ಯೆ ಗಲಾಟೆಯಾಗಿತ್ತು. ಈ ವೇಳೆ ಬಾಲಕ, ಕೇಂದ್ರ ಬಸ್ ನಿಲ್ದಾಣಕ್ಕೆ ತನ್ನ ಸ್ನೇಹಿತನನ್ನು ಕರೆಸಿಕೊಂಡು ಮಾಜ್ ಸನದಿಗೆ ಚಾಕು ಇರಿದಿದ್ದರು. ಬಳಿಕ ಅಲ್ಲಿಂದ ಇಬ್ಬರು ಪರಾರಿಯಾಗಿದ್ದರು.
ಬೆಳಗಾವಿ ನಗರ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಅವರ ನೇತೃತ್ವದಲ್ಲಿ ಸ್ಥಳೀಯ ಪೊಲೀಸ್ ಪಡೆ ಶೀಘ್ರಗತಿಯ ತನಿಖೆ ಕೈಗೊಂಡು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಇಬ್ಬರೂ ಕೂಡ ಅಪ್ರಾಪ್ತರಾಗಿರುವುದರಿಂದ ನ್ಯಾಯಾಂಗ ಪ್ರಕ್ರಿಯೆ ಪ್ರತ್ಯೇಕವಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಬೆಳಗಾವಿ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಚಾಕು, ಮಾರಕಾಸ್ತ್ರಗಳೊಂದಿಗೆ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. “ಬಸ್ ನಿಲ್ದಾಣ, ಮಾರ್ಕೆಟ್ ಪ್ರದೇಶದಂತಹ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾರಕಾಸ್ತ್ರಗಳೊಂದಿಗೆ ಇರುವವರನ್ನು ತಕ್ಷಣವೇ ಬಂಧಿಸಲಾಗುವುದು. ಇಂಥವರ ಮೇಲೆ ರೌಡಿಶೀಟ್ ತೆರೆಯಲಾಗುತ್ತದೆ” ಎಂದು ಕಮಿಷನರ್ ಭೂಷಣ್ ಬೊರಸೆ ಹೇಳಿದರು.



