ಮಂಗಳೂರು (ದಕ್ಷಿಣ ಕನ್ನಡ) : ಇಂಧನ ತುಂಬಿಸಿ ಪೆಟ್ರೋಲ್ ಬಂಕ್ ಗೆ ಹಣ ನೀಡದೆ ಪರಾರಿಯಾದ ಕಾರೊಂದು ಅಪಘಾತಕ್ಕೀಡಾಗಿ ಅದರಲ್ಲಿದ್ದ ಯುವಕರಿಬ್ಬರು ಪೊಲೀಸರ ಅತಿಥಿಗಳಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಸಾಲೆತ್ತೂರು ಎಂಬಲ್ಲಿ ನಡೆದಿದೆ.
ಆಲ್ಟೋ ಕಾರೊಂದರಲ್ಲಿದ್ದ ಇಬ್ಬರು ಯುವಕರು ಬಿ.ಸಿ.ರೋಡಿನ ಪೆಟ್ರೋಲ್ ಬಂಕ್ ವೊಂದರಲ್ಲಿ ಕಾರಿಗೆ ಪೆಟ್ರೋಲ್ ತುಂಬಿಸಿ ಹಣ ನೀಡದೆ ಪರಾರಿಯಾಗಿದ್ದಾರೆ. ಅಲ್ಲಿಂದ ಸಾಲೆತ್ತೂರು ಮಾರ್ಗವಾಗಿ ತೆರಳಿದ ಈ ಕಾರು ಪಾಲ್ತಾಜೆ ಎಂಬಲ್ಲಿ ದ್ವಿಚಕ್ರ ವಾಹನವೊಂದಕ್ಕೆ ಢಿಕ್ಕಿ ಹೊಡೆದಿದೆ. ಇದರಿಂದ ದ್ವಿಚಕ್ರ ವಾಹನ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕರ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳಕ್ಕೆ 112 ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರಿನಲ್ಲಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಬ್ಬರೂ ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ.