ಮಂಡ್ಯ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯದ ನಾಗಮಂಗಲ ತಾಲೂಕಿನ ಯರಗನಹಳ್ಳಿಯಲ್ಲಿ ನಡೆದಿದೆ.
ಯರಗನಹಳ್ಳಿಯ ಪ್ರಕಾಶ್ ಗೌಡ (24) ಮತ್ತು ಯಶಸ್ (23) ಮೃತಪಟ್ಟ ದುರ್ದೈವಿಗಳು. ಇಬ್ಬರು ಯುವಕರು ನಿನ್ನೆ ತಮ್ಮ ಸ್ನೇಹಿತರೊಂದಿಗೆ ಸೇರಿ ಕೆರೆಗೆ ಈಜಲು ಹೋಗಿದ್ದಾರೆ. ಈ ವೇಳೆ ಕೆರೆಯಲ್ಲಿನ ಆಳ ತಿಳಿಯದೆ ಇಬ್ಬರೂ ಯುವಕರು ಮುಳುಗಿದ್ದಾರೆ ಎನ್ನಲಾಗಿದೆ. ನಿನ್ನೆಯಿಂದಲೇ ಯುವಕರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಆದರೆ ನೆನ್ನೆ ಇಬ್ಬರೂ ಸಿಕ್ಕಿರಲಿಲ್ಲ.
ಇಂದು ಬೆಳಿಗ್ಗೆ ಕೆರೆಯಿಂದ ಯುವಕರಿಬ್ಬರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು, ಮಂಡ್ಯದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಪಾರ್ಥಿವ ಶರೀರಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸ್ಥಳಕ್ಕೆ ಭೇಟಿ ನೀಡಿದರು. ಮೃತ ಯುವಕರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಅವರು, ಸರ್ಕಾರದ ವತಿಯಿಂದ ಅಗತ್ಯ ನೆರವು ನೀಡುವ ಭರವಸೆ ನೀಡಿದರು. ಈ ಘಟನೆಗೆ ಸಂಬಂಧಿಸಿದಂತೆ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



