Tuesday, September 30, 2025
Google search engine

Homeರಾಜ್ಯಸುದ್ದಿಜಾಲಉ.ಕ. ಪ್ರತ್ಯೇಕ ರಾಜ್ಯದ ಕೂಗು : ಕತ್ತಿ ಬಳಿಕ ರಾಜು ಕಾಗೆ ಸರದಿ

ಉ.ಕ. ಪ್ರತ್ಯೇಕ ರಾಜ್ಯದ ಕೂಗು : ಕತ್ತಿ ಬಳಿಕ ರಾಜು ಕಾಗೆ ಸರದಿ

ವರದಿ: ಸ್ಟೀಫನ್ ಜೇಮ್ಸ್

ಬೆಳಗಾವಿ ಜಿಲ್ಲೆಯ ಹಿರಿಯ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ದಿವಂಗತ ಉಮೇಶ್‌ ಕತ್ತಿ ಅವರು ಅನೇಕ ಬಾರಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಅಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹೇಳಿಕೆ ಬಂದಾಗ ಪರ-ವಿರೋಧ ಪ್ರತಿಕ್ರಿಯೆಗಳು ಕೇಳಿಬರುತ್ತಿದ್ದವು. ಇದೀಗ ಅದೇ ಜಿಲ್ಲೆಯಿಂದ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಶಾಸಕ ರಾಜು ಕಾಗೆ ಕೂಡ ಪ್ರತ್ಯೇಕ ರಾಜ್ಯದ ಪರ ನಿಲುವು ತಾಳಿದ್ದಾರೆ.

ವಾಯುವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ರಾಜು ಕಾಗೆ ಈ ಬಗ್ಗೆ ಮಾತನಾಡಿ, ಉತ್ತರ ಕರ್ನಾಟಕವು ಇಂದಿಗೂ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದೆ. ಕಲ್ಯಾಣ ಕರ್ನಾಟಕದ ಪ್ರತಿಯೊಬ್ಬ ಶಾಸಕರಿಗೂ ₹500 ಕೋಟಿ ಅನುದಾನ ನೀಡಲಾಗುತ್ತಿದೆ. ಅದೇ ರೀತಿಯಲ್ಲಿ ಕಿತ್ತೂರು ಕರ್ನಾಟಕಕ್ಕೂ ವಿಶೇಷ ಅನುದಾನ ನೀಡಲಿ ಅಥವಾ ಪ್ರತ್ಯೇಕ ರಾಜ್ಯ ರಚಿಸಲಿ ಎಂದು ಹೇಳಿದ್ದಾರೆ.

ಜನಪ್ರತಿನಿಧಿಗಳ ಒಗ್ಗಟ್ಟಿನ ಕೊರತೆಯಿಂದಲೇ ಈ ಭಾಗ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ. ಆದ್ದರಿಂದ ನಾನು ಪ್ರತ್ಯೇಕ ರಾಜ್ಯದ ಪರವಾಗಿದ್ದೇನೆ. ನಿರ್ಲಕ್ಷ್ಯ ಎದುರಾದಾಗ ಪ್ರತ್ಯೇಕ ರಾಜ್ಯ ಬೇಡುವುದು ಸಹಜ ಎಂದು ಹೇಳಿದರು. ಸಂಪುಟ ಪುನರ್‌ರಚನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಸಚಿವ ಸ್ಥಾನ ಮಾತ್ರವಲ್ಲ, ಸಿಎಂ ಸ್ಥಾನಕ್ಕೂ ಆಕಾಂಕ್ಷಿ. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಯಾವ ಖಾತೆ ನೀಡಿದರೂ ಅದನ್ನು ನಾನು ಉತ್ತಮವಾಗಿ ನಿಭಾಯಿಸಬಲ್ಲೆ. ಈ ಬಾರಿ ಹಿರಿಯರಿಗೂ ಅವಕಾಶ ಸಿಗಲಿ ಎಂದು ಆಗ್ರಹಿಸಿದರು.

ಅದೇ ವೇಳೆ, ಸರ್ಕಾರಿ ಯೋಜನೆಗಳ ದುರುಪಯೋಗವನ್ನು ಉಲ್ಲೇಖಿಸಿ, ನನ್ನ ಸಂಬಂಧಿಕರಿಗೂ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿ ಅನೇಕ ಸೌಲಭ್ಯ ಸಿಗುತ್ತಿವೆ. ಆದರೆ ಅನೇಕ ಶ್ರೀಮಂತರೂ ಇದರ ಫಲಾನುಭವಿಗಳಾಗಿದ್ದಾರೆ. ಇಂಥವರನ್ನು ಗುರುತಿಸಿ ಯೋಜನೆ ಹಿಂಪಡೆಯಬೇಕು. ಬಡವರಿಗೆ ಮಾತ್ರ ಸೌಲಭ್ಯ ಸಿಗಬೇಕು. ಇಲ್ಲದಿದ್ದರೆ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಸೋರಿಕೆಯಾದ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂದು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯ ವಿಂಗಡಣೆ ಕುರಿತ ಬೇಡಿಕೆಯನ್ನೂ ಅವರು ಒತ್ತಿ ಹೇಳಿದರು. ಸವದತ್ತಿ, ರಾಮದುರ್ಗ, ಬೈಲಹೊಂಗಲ ಸೇರಿ ಬೈಲಹೊಂಗಲ ಜಿಲ್ಲೆ ರಚನೆಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲಿನ ಜನ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿಕ್ಕೋಡಿ ಜಿಲ್ಲೆ ಘೋಷಣೆ ಆಗುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

RELATED ARTICLES
- Advertisment -
Google search engine

Most Popular