ಚಾಮರಾಜನಗರ: ಭಾರತದ ಸ್ವಾತಂತ್ರ್ಯ ಚಳುವಳಿಯ ಕ್ರಾಂತಿಕಾರಿ ಉದಮ್ ಸಿಂಗ್ ಮಹಾನ್ ಹುತಾತ್ಮರು. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧವಾಗಿ ಅಂದಿನ ಪಂಜಾಬ್ ಗೌರ್ನರ್ ಜನರಲ್ ಓ ಡಯರ್ ನನ್ನು ಕೊಂದು ಹಾಕಿದ ಮಹಾನ್ ದೇಶಭಕ್ತ. ಜುಲೈ 31 1940 ರಂದು ಉಧಮ್ ಸಿಂಗ್ ರವರನ್ನು ಬ್ರಿಟಿಷರು ನೇಣುಗೇರಿಸಿದರು. ಕ್ರಾಂತಿಕಾರರ ತ್ಯಾಗ, ಬಲಿದಾನದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಋಗ್ವೇದಿ ಯುತ್ ಕ್ಲಬ್, ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟ ಬ್ಯಾಡ ಮೂಡ್ಲು ಗ್ರಾಮದ ಶೆಟ್ಟರ ತೋಟದಲ್ಲಿ ಹಮ್ಮಿಕೊಂಡಿದ್ದ ಉದಮ್ ಸಿಂಗ್ ಹುತಾತ್ಮ ದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ 1919 ಏಪ್ರಿಲ್ 13 ರಂದು ಪಂಜಾಬಿನ ಅಮೃತಸರ ದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಇಡೀ ಜಗತ್ತಿನಲ್ಲಿ ಅತ್ಯಂತ ಕ್ರೂರವಾದ ಬ್ರಿಟಿಷರ ದೌರ್ಜನ್ಯವಾಗಿತ್ತು.
ಶಾಂತ ರೀತಿಯ ಸ್ವಾತಂತ್ರ್ಯ ಚಳುವಳಿಗಾರರಿಗೆ ಗುಂಡಿನ ದಾಳಿ ಮಾಡಿ ಸಾವಿರಕ್ಕೂ ಹೆಚ್ಚು ಸ್ವಾತಂತ್ರ ಚಳುವಳಿಗಾರರನ್ನು ಕೊಂದುಹಾಕಿ , ಸಾವಿರಾರು ಜನ ಶಾಶ್ವತವಾಗಿ ಅಂಗವಿಕಲರಾದ ಘಟನೆ ಇಡೀ ಜಗತ್ತಿನಲ್ಲಿ ಅತ್ಯಂತ ಕ್ರೂರವಾದ ಘಟನೆಯಾಗಿತ್ತು . ಈ ಘಟನೆಗೆ ಕಾರಣಕರ್ತನಾದ ಪಂಜಾಬಿನ ಬ್ರಿಟಿಷ್ ಗೌರ್ನರ್ ಜನರಲ್ ಡಯರ್ ನನ್ನು ಇಂಗ್ಲೆಂಡಿನಲ್ಲಿ ಕೊಂದು ಹಾಕಿದ ಉಧಮ್ ಸಿಂಗ್ ರವರ ಹೋರಾಟ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕು . ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ರಾಂತಿಕಾರರ ಪಾತ್ರ ಅಪಾರವಾಗಿದ್ದು ,ಪ್ರತಿ ಕ್ರಾಂತಿಕಾರರ ಬಲಿದಾನಗಳು ಹಾಗೂ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ ಅತ್ಯಂತ ಕಠಿಣ ಶಿಕ್ಷೆ ಅನುಭವಿಸಿ ವೀರಮರಣ ಹೊಂದಿದ ನೂರಾರು ಹೋರಾಟಗಾರರ ಇತಿಹಾಸ ಮರೆಯಲಾಗದು. ಯುವಕರಿಗೆ ದೇಶಪ್ರೇಮದ ಪ್ರಜ್ಞೆಯನ್ನು ರಾಷ್ಟ್ರೀಯ ಚಳುವಳಿಯ ಇತಿಹಾಸವನ್ನು ತಿಳಿಸುವ ಕಾರ್ಯ ಎಲ್ಲೆಡೇ ಹೆಚ್ಚಾಗಬೇಕು.
ಯುವಶಕ್ತಿಗೆ ದೇಶದ ಸ್ವಾತಂತ್ರ್ಯ ಚಳುವಳಿಯ ವಿವಿಧ ಸ್ವರೂಪವನ್ನು ತಿಳಿಸುವ ಮಹತ್ಕಾರ್ಯ ಆಗಬೇಕು. ಆ ಮೂಲಕ ದೇಶಪ್ರೇಮ ,ದೇಶ ನಿಷ್ಠೆ ಬೆಳೆಸುವ ಮೂಲಕ ಉತ್ತಮ ಪ್ರೇರಣೆಯನ್ನು ನೀಡುವ ಕಾರ್ಯವನ್ನು ಸರ್ವರೂ ಸೇರಿ ಮಾಡಬೇಕಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರಮೇಶ್ ರವರು ಮಾತನಾಡಿ ಭಾರತದ ಸ್ವಾತಂತ್ರ್ಯ ಚಳುವಳಿ ನೂರಾರು ಹೋರಾಟ ಹಾಗೂ ಚಳುವಳಿಯ ಮೂಲಕ ನಡೆದ ಇತಿಹಾಸ ಪ್ರಸಿದ್ಧವಾದ ಚಳುವಳಿಯಾಗಿದೆ. ಸ್ವಾತಂತ್ರ್ಯ ಚಳುವಳಿಯಲ್ಲಿ ತೀವ್ರಗಾಮಿಗಳು, ಕ್ರಾಂತಿಕಾರರು , ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಹೋರಾಟದ ಜೊತೆಗೆ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹೋರಾಟಗಳು ಬ್ರಿಟಿಷರನ್ನು ಭಾರತದಿಂದ ಹೊರ ಹೋಗುವಂತೆ ಮಾಡಿತು. ಚಳುವಳಿಯಲ್ಲಿ ಕ್ರಾಂತಿಕಾರರು ನೂರಾರು ಸಂಖ್ಯೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡರು. ಕ್ರಾಂತಿಕಾರಿಗಳೆಲ್ಲರೂ ಯುವಕರಾಗಿದ್ದು ಯುವಶಕ್ತಿ ರ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡ ಇತಿಹಾಸ ಅರಿಯುವ ಅಗತ್ಯವಿದೆ ಎಂದರು.
ಜಿಲ್ಲಾ ಯುವ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ ಪ್ರತಿ ಗ್ರಾಮಗಳಲ್ಲೂ ಯುವ ಸಂಘಟನೆಗಳು ದೇಶಪ್ರೇಮದ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿ ಮೂಡಿಸುವ ಜೊತೆಗೆ ಬಾಲ್ಯ ವಿವಾಹ ,ವ್ಯಸನದ ವಿರುದ್ಧ ಹೋರಾಡುವ ಮೂಲಕ ನೂರಾರು ಕುಟುಂಬಗಳನ್ನು ಉಳಿಸುವ ಕಾರ್ಯವನ್ನು ಯುವ ಸಂಘಟನೆಗಳು ಹಮ್ಮಿಕೊಳ್ಳಬೇಕು. ಯುವಶಕ್ತಿ ನಾಶವಾಗದಂತೆ ರಾಷ್ಟ್ರ ನಿರ್ಮಾಣಕ್ಕಾಗಿ ಉನ್ನತ ಶಿಕ್ಷಣಕ್ಕಾಗಿ ಮುಡಿಪಾಗಿರುವ ಮೂಲಕ ಶಕ್ತಿಯಾಗಿ ಹೊರಬರಬೇಕು . ಕ್ರಾಂತಿಕಾರರ ಜೀವನ ಚರಿತ್ರೆಗಳು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.