Tuesday, July 7, 2026
Google search engine

Homeದೇಶಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವ : ಕೇಂದ್ರ ಸಚಿವರ ಶ್ಲಾಘನೆ

ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವ : ಕೇಂದ್ರ ಸಚಿವರ ಶ್ಲಾಘನೆ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ‘ಬಿಂದಾಂಗ್ ಆದಿಪೂರ್ಣ’ (Bintang Adipurna) ಪ್ರಶಸ್ತಿ ಲಭಿಸಿರುವುದಕ್ಕೆ ಕೇಂದ್ರ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್: ಪ್ರಧಾನಿ ಮೋದಿಯವರಿಗೆ ಈ ಗೌರವ ಸಂದಿರುವುದು ಪ್ರತಿಯೊಬ್ಬ ಭಾರತೀಯನಿಗೂ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದ್ದಾರೆ. ಭಾರತ-ಇಂಡೋನೇಷ್ಯಾ ನಡುವಿನ 'ವ್ಯಾಪಕ ಕಾರ್ಯತಂತ್ರದ ಪಾಲುದಾರಿಕೆ'ಯನ್ನು ಬಲಪಡಿಸಲು ಮತ್ತು ಭಾರತ-ಆಸಿಯಾನ್ (ASEAN) ಸಂಬಂಧಗಳನ್ನು ಆಳವಾಗಿಸಲು ಪ್ರಧಾನಿ ಮೋದಿ ಅವರು ನಡೆಸಿದ ನಿರಂತರ ಪ್ರಯತ್ನಗಳಿಗೆ ಸಂದ ಜಯ ಇದಾಗಿದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್: ಪ್ರಧಾನಿ ಮೋದಿಯವರ ದೂರದರ್ಶಿತ್ವದ ನಾಯಕತ್ವ, ಪರಿವರ್ತನಾತ್ಮಕ ರಾಜತಾಂತ್ರಿಕತೆ ಹಾಗೂ ಪರಸ್ಪರ ನಂಬಿಕೆ ಮತ್ತು ಗೌರವದ ಆಧಾರದ ಮೇಲೆ ಜಾಗತಿಕ ಪಾಲುದಾರಿಕೆಯನ್ನು ಬಲಪಡಿಸುವ ಅವರ ಬದ್ಧತೆಗೆ ಸಿಕ್ಕ ಭವ್ಯ ಮನ್ನಣೆ ಇದಾಗಿದೆ ಎಂದು ಶ್ಲಾಘಿಸಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್: ಇದು ದೇಶಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿರುವ ಅವರು, ಪ್ರಾಚೀನ ಸಮುದ್ರಯಾನದ ಸಂಪರ್ಕದಿಂದ ಹಿಡಿದು ಇಂದಿನ ಡೈನಾಮಿಕ್ ಪಾಲುದಾರಿಕೆಯವರೆಗೆ ಭಾರತ ಮತ್ತು ಇಂಡೋನೇಷ್ಯಾ ದೇಶಗಳು ನಂಬಿಕೆ ಮತ್ತು ಗೌರವದ ಸಂಬಂಧವನ್ನು ಬೆಳೆಸಿಕೊಂಡು ಬಂದಿವೆ ಎಂದಿದ್ದಾರೆ. ಅಲ್ಲದೆ, ಶಾಂತಿಯುತ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ವಲಯದ ಭಾರತದ ದೃಷ್ಟಿಕೋನಕ್ಕೆ ಆಸಿಯಾನ್‌ನಲ್ಲಿ ಪ್ರಮುಖ ಪಾಲುದಾರನಾಗಿರುವ ಇಂಡೋನೇಷ್ಯಾ ಅತ್ಯಂತ ಪ್ರಮುಖವಾಗಿದೆ ಎಂದು ಅವರು ತಿಳಿಸಿದ್ದಾರೆ.

'ಬಿಂದಾಂಗ್ ಅದಿಪೂರ್ಣ' ಪ್ರಶಸ್ತಿಯ ಹಿನ್ನೆಲೆ:
1959 ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯು ಇಂಡೋನೇಷ್ಯಾ ಗಣರಾಜ್ಯದ ಅತ್ಯುನ್ನತ ನಾಗರಿಕ ಗೌರವವಾಗಿದೆ. ಇಂಡೋನೇಷ್ಯಾದ ಏಕತೆ, ನಿರಂತರತೆ ಮತ್ತು ಸಮೃದ್ಧಿಗಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಇದನ್ನು ನೀಡಲಾಗುತ್ತದೆ.
RELATED ARTICLES
- Advertisment -
Google search engine

Most Popular