ವೆನೆಜುವೆಲ ದೇಶದ ಮೇಲೆ ಅಮೆರಿಕಾದ ಅತಿಕ್ರಮಣ, ದಾಳಿಯನ್ನು ಸಿಪಿಐಎಂ ಖಂಡಿಸುತ್ತದೆ ಮತ್ತು ಅಕ್ರಮವಾಗಿ ಬಂಧಿಸಿದ ವೆನೆಜುವೆಲ ಅದ್ಯಕ್ಷರಾದ ನಿಕೋಲಸ್ ಮಾಡೂರ ಅವರನ್ನು ಮತ್ತು ಅವರ ಪತ್ನಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮತಿ ಸದಸ್ಯೆ ಶ್ರೀಮತಿ ಈಶ್ವರಿ ಶಂಕರ್ ಪದ್ಮುಂಜ ಹೇಳಿದರು.
ಅವರು ಇಂದು ಬೆಳ್ತಂಗಡಿಯ ತಾಲೂಕು ಕಚೇರಿ ಎದುರು ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಅಮೆರಿಕ ವೆನೆಜುವೆಲ ಮೇಲೆ ಅತಿಕ್ರಮಣ ಮಾಡಿದ್ದರ ವಿರುದ್ದ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತಾಡುತ್ತಿದ್ದರು. ವೆನೆಜುವೆಲಾ ದೇಶದ ಸಾರ್ವಭೌಮತೆ, ಸ್ವಾತಂತ್ರದ ಮೇಲೆ ಅಮೇರಿಕಾದ ಸರ್ವಾದಿಕಾರಿ ದಾಳಿಯನ್ನು ಭಾರತ ಖಂಡಿಸಬೇಕು ಮತ್ತು ವೆನೆಜುವೆಲ ಜೊತೆ ನಾವಿದ್ದೇವೆ ಎಂದು ಘೋಷಿಸಬೇಕು ಎಂದರು.
ಇನ್ನೊಂದು ದೇಶದ ಸ್ವಾಭಿಮಾನ, ಸಾರ್ವಬೌಮತೆ ಮೇಲಿನ ಸರ್ವಾಧಿಕಾರದ ಹೇಯ ದಾಳಿ ಇದಾಗಿದೆ. ಯಾವುದೇ ಒಂದು ದೇಶವು ಇನ್ನೊಂದು ದೇಶದ ಆಂತರಿಕ ವಿಚಾರದ ಮೇಲಿನ ದಾಳಿ ಮಾಡಬಾರದೆಂಬ ನಿಯಮ ಇದ್ದಾಗಿಯೂ ಈ ದಾಳಿ ಆಗಿದೆ. ವಿಶ್ವಸಂಸ್ಥೆ ತಕ್ಷಣ ಮಧ್ಯಪ್ರವೇಶ ಮಾಡಬೇಕಾಗಿದೆ ಎಂದರು.
ಆ ಬಳಿಕ ಮಾತಾಡಿದ ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ಹಾಗೂ ರೈತ ಮುಖಂಡರಾದ ಶ್ಯಾಮರಾಜ್ ಅವರು ವೆನಿಜುವೆಲಾ ರಕ್ಷಿಸುವುದು ಪ್ರತಿಯೊಂದು ದೇಶದ ಸ್ವಾತಂತ್ರ & ಸಾರ್ವಭೌಮತೆಯ ರಕ್ಷಣೆಯೂ ಆಗಿದೆ ಎಂದರು. ಅಮೆರಿಕದ ಯುದ್ದಕೋರ ನೀತಿಯನ್ನು ಮತ್ತು ಅಮಾನವೀಯ ನಡೆಯನ್ನು ಇದು ಪ್ರತಿಬಿಂಬಿಸುತ್ತಿದೆ ಹಾಗೂ ಇದು ಅಂತರರಾಷ್ಟ್ರೀಯ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು. ಸರ್ವಾಧಿಕಾರಿ ಆಡಳಿತವನ್ನು ನಾವು ಯಾವತ್ತೂ ಬೆಂಬಲಿಸಬಾರದು ಎಂಬುದಕ್ಕೆ ಈ ಘಟನೆ ನಮಗೆ ಸಾಕ್ಷೀ ಭೂತವಗಿದೆ. ಈ ಸರ್ವಾಧಿಕಾರಿ ನಡೆ ಇಂದು ಅಲ್ಲಿ ನಾಳೆ ಇಲ್ಲಿಗೂ ಬರಬಹುದು ಎಂದ ಅವರು ಈ ಕೃತ್ಯವನ್ನು ನಾವು ವಿರೋಧಿಸಿ ವೆನೆಜುವೆಲ ಪರ ಅಂದರೆ ನ್ಯಾಯದ ಪರ ನಿಲ್ಲಬೇಕಾದ್ದು ಅನಿವಾರ್ಯ ಎಂದರು.
ಬಳಿಕ ಹಿರಿಯ ರೈತ ಮುಖಂಡರಾದ ಲಕ್ಷ್ಮಣ ಗೌಡ ಪಾಂಗಳ ಮಾತಾಡಿ ವೆನೆಜುವೆಲಾದ ತೈಲ ನಿಕ್ಷೇಪದ ಮೇಲೆ ಕಣ್ಣಿಟ್ಟ ಈ ಅಮೇರಿಕ ದೇಶವನ್ನು ಮಣಿಸಲು ಜಗತ್ತಿನ ಕೆಂಪು ಸೈನ್ಯ ಸಿದ್ದವಾಗುತ್ತದೆ ಎಂದರು. ಸರ್ವಾದಿಕಾರಿ ಜರ್ಮನಿ ಹಿಟ್ಲರನ ನಾಶ ನಡೆದಿರುವುದು ರಷ್ಯಾದ ಕೆಂಪು ಸೈನ್ಯದಿಂದ ಎಂಬುದನ್ನು ಅವರು ನೆನಪಿಸಿದರು.
ಹೋರಾಟದ ನೇತೃತ್ವದಲ್ಲಿ ಜಯರಾಮ ಮಯ್ಯ, ಧನಂಜಯ ಗೌಡ, ಜಯಶ್ರೀ, ಅಜಿ.ಎಂ.ಜೋಸ್, ಸಲಿಮೋನ್, ಪುಷ್ಪ, ನಜೀರ್ ಕಕ್ಕಿಂಜೆ, ಜೆ.ಎಂ.ಎಸ್ ಜಿಲ್ಲಾಧ್ಯಕ್ಷೆ ಕಿರಣಪ್ರಭ, ಕುಮಾರಿ ಮೊದಲಾದವರು ಇದ್ದರು. ಮೊದಲಿಗೆ ರೈತ ಮುಖಂಡ ಸಲಿಮೋನ್ ಸ್ವಾಗತಿಸಿ ಕೊನೆಗೆ ಪುಷ್ಪ ವಂದಿಸಿದರು. ಜಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಕೊನೆಗೆ ಬೆಳ್ತಂಗಡಿ ತಹಶೀಲ್ದಾರ್ ಮೂಲಕ ಭಾರತ ಸರಕಾರಕ್ಕೆ ಮನವಿ ನೀಡಲಾಯಿತು.
- ಶಂಶೀರ್ ಬುಡೋಳಿ



